ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ: ಇಂದು ಐತಿಹಾಸಿಕ ಪ್ರಮಾಣವಚನ

ನವದೆಹಲಿ : ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಕ್ಷವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ನಿನ್ನೆ ಘೊಷಿಸಿದೆ. ಇದರೊಂದಿಗೆ ನಾಲ್ಕನೇ ಬಾರಿಗೆ ರಾಷ್ಟ್ರ ರಾಜಧಾನಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಾಂತಾಗಿದೆ. ರೇಖಾ ಗುಪ್ತಾ ಅವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಇಂದು (ಫೆ20) ಮಧ್ಯಾಹ್ನ 12:35ರ ಸುಮಾರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ 70 ವಿಧಾನಸಭಾ ಸ್ಥಾನಗಳ ಪೈಕಿ ಬರೋಬ್ಬರಿ 48 ಸ್ಥಾನಗಳಲ್ಲಿ ವಿಜಯ ಸಾಧಿಸಿರುವ ಬಿಜೆಪಿಯ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮವು ಇಂದು ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎನ್‌ಡಿಎ ನಾಯಕರಾದ ಚಂದ್ರ ಬಾಬು ನಾಯ್ಡು, ಏಕನಾಥ್ ಶಿಂಧೆ, ನಿತಿಶ್ ಕುಮಾರ್ ಹಾಗೂ ಇತರೆ ಬಿಜೆಪಿ ಸರ್ಕಾರಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಯೇ ದೆಹಲಿಯ ನೂತನ ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಪರ್ವೇಶ್ ವರ್ಮಾ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏತನ್ಮಧ್ಯೆ ದೆಹಲಿಯ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಮೋಹನ್ ಸಿಂಗ್ ಬಿಶ್ತ್ ಅವರನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಥಿ ನಾಯಕಿಯಾಗಿ ಗುರುತಿಸಿಕೊಂಡು ರಾಜಕೀಯ ಜೀವನವನ್ನು ಪ್ರಾರಂಭಿಸಿದ 50 ವರ್ಷ ವಯಸ್ಸಿನ ರೇಖಾ ಗುಪ್ತಾ ಅವರು, ಪ್ರಸ್ತುತ ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇವರು ಈ ಹಿಂದೆ ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ (ವಾಯುವ್ಯ) ಸ್ಥಾನವನ್ನು 68,200 ಮತಗಳಿಂದ ಗೆಲುವು ಸಾಧಿಸಿದ್ದರು.
ಇನ್ನು ವೃತ್ತಿಯಲ್ಲಿ ವಕೀಲರಾಗಿರುವ ರೇಖಾ ಗುಪ್ತಾ ಅವರು, 1996ರಿಂದ 1997 ರವರೆಗೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) ಅಧ್ಯಕ್ಷರಾಗಿ ರಾಜಕೀಯದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಅವರು 2007ರಲ್ಲಿ ಉತ್ತರಿ ಪಿತಂಪುರ (ವಾರ್ಡ್ 54) ನಿಂದ ದೆಹಲಿ ಕೌನ್ಸಿಲರ್ ಚುನಾವಣೆಯಲ್ಲಿ ಗೆಲುವು ಸಾಧಿಸಿ, 2012ರಲ್ಲಿ ನಡೆದ ಮರುಚುನಾವಣೆಯಲ್ಲೂ ಗೆಲವು ದಾಖಲಿಸಿದ್ದರು.
50 ವರ್ಷದ ರೇಖಾ ಗುಪ್ತಾ ಅವರು ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಮತ್ತು ಅತಿಶಿ ನಂತರ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದಾರೆ.