ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆ ಏರಿಕೆ: 6 ತಿಂಗಳಲ್ಲಿ 22,000 ಪ್ರಕರಣಗಳು ಪತ್ತೆ

ಬೆಂಗಳೂರು: ಕೆಲವು ತಂದೆ-ತಾಯಿಗಳಿಗೆ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂಬ ಭಾವನೆ ಇರುತ್ತದೆ. ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು ದೌರ್ಜನ್ಯ ಹಾಗೂ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆಗೆ ಕಾರಣವಾಗುತ್ತಿದೆ.

ಕರ್ನಾಟಕದಲ್ಲಿ (Karnataka)18 ವರ್ಷ ತುಂಬುವುದಕ್ಕಿಂತ ಮೊದಲೇ ಗರ್ಭಿಣಿ ಆಗುತ್ತಿರುವವರ ಸಂಖ್ಯೆ (Teenage Pregnancy) ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ, ಈ ಬಗ್ಗೆ ಗಮನಹರಿಸಬೇಕೆಂದು ಎಲ್ಲ ಇಲಾಖೆಗಳಿಗೆ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿಯೂ ಹೆಚ್ಚುತ್ತಿದೆ ಟೀನೇಜ್ ಪ್ರೆಗ್ನೆನ್ಸಿ
ಬೆಂಗಳೂರಿನಲ್ಲಿಯೂ ವರ್ಷದಿಂದ ವರ್ಷಕ್ಕೆ ಟಿನೇಜ್ ಪ್ರಗ್ನೆನ್ಸಿ ಏರಿಕೆ ಕಾಣುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಾದ್ಯಂತ ಒಟ್ಟಾರೆಯಾಗಿ 3,36,000 ಕ್ಕೂ ಹೆಚ್ಚು ಟಿನೇಜ್ ಪ್ರಗ್ನೆನ್ಸಿ ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳೂರು ಅರ್ಬನ್ನಲ್ಲಿ 8891 ದಾಖಲಾಗಿವೆ. ಈ ವಿಚಾರವಾಗಿ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳು ಆಘಾತಕಾರಿಯಾಗಿವೆ.
ಆರೇ ತಿಂಗಳಲ್ಲಿ 22000 ಟೀನೇಜ್ ಪ್ರೆಗ್ನೆನ್ಸಿ!
ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ 22000 ಸಾವಿರ ಹಾಗೂ ಬೆಂಗಳೂರು ಅರ್ಬನ್ನಲ್ಲಿ 8891 ಟೀನೇಜ್ ಪ್ರಗ್ನೆನ್ಸಿ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಆರೋಗ್ಯ ಇಲಾಖೆ ಕೂಡಾ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಟೀನೇಜ್ ಪ್ರೆಗ್ನೆನ್ಸಿಗೆ ಪ್ರಮುಖ ಕಾರಣಗಳೇನು?
14 ನೇ ವಯಸ್ಸಿನಲ್ಲೇ ಅತಿ ಹೆಚ್ಚು ಬಾಲಕಿಯರು ಗರ್ಭಿಣಿ ಆಗುತ್ತಿದ್ದಾರೆ. ಅರಿವಿನ ಕೊರತೆ, ಪ್ರೊಟೆಕ್ಷನ್ ಕೊರತೆಯಿಂದ ಪ್ರಕರಣಗಳು ಹೆಚ್ಚಳ ಕಂಡಿವೆ. ಬಾಲ್ಯ ವಿವಾಹ, ಅನಕ್ಷರತೆ ಮತ್ತು ಬಡತನ, ವಲಸೆ ಹೋಗುವ ಪ್ರವೃತ್ತಿ ಸಾಮಾಜಿಕ ಅಭದ್ರತೆ, ಕುಟುಂಬ ಕಲ್ಯಾಣ ವಿಧಾನಗಳ ಅರಿವು ಇಲ್ಲದಿರುವುದು, ಹುಡುಗಿಯರ ಅಭಿಪ್ರಾಯಕ್ಕೆ ಮನ್ನಣೆ ನೀಡದಿರುವುದು ಟೀನೇಜ್ ಪ್ರೆಗ್ನೆನ್ಸಿಗೆ ಪ್ರಮುಖ ಕಾರಣಗಳಾಗಿವೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡಾ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.
ಬಾಲ ಗರ್ಭಿಣಿಯಾಗುವುದರಿಂದ ತಾಯಿ, ಮಗುವಿನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇದ್ದು, ಸರ್ಕಾರ ಈ ಬಗ್ಗೆ ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕಿದೆ.