ಹುಚ್ಚಾಟ ಮೆರೆದ ಯುವಕರು; ಸ್ಕೂಟರ್‌ನಲ್ಲಿ ಬರೋಬ್ಬರಿ 6 ಮಂದಿ ಪ್ರಯಾಣ, ವಿಡಿಯೋ ವೈರಲ್

ಬೆಂಗಳೂರು :ದ್ವಿಚಕ್ರವಾಹನದಲ್ಲಿ ನಿಯಮದ ಪ್ರಕಾರ ಇಬ್ಬರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ. ತ್ರಿಬಲ್ ರೈಡಿಂಗ್ ಮಾಡಿದರೆ ನಿಯಮ ಉಲ್ಲಂಘನೆ ಜೊತೆಗೆ ದಂಡವೂ ಪಾವತಿಸಬೇಕು. ಆದರೆ ಬೆಂಗಳೂರಿನ ಯುವಕರ ಗುಂಪು ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಮಂದಿ ಸ್ಕೂಟರ್ ಮೇಲೆ ಪ್ರಯಾಣಿಸಿದ್ದಾರೆ. ಹ್ಯಾಚ್‌ಬ್ಯಾಕ್, ಎಸ್‌ಯುವಿ ಸೇರಿದಂತೆ ಸಣ್ಣ ಕಾರಿನಿಂದ ಸಬ್‌ಕಾಂಪಾಕ್ಟ್ ವರೆಗಿನ ಕಾರಿನಲ್ಲೂ 5 ಮಂದಿಗೆ ಮಾತ್ರ ಪ್ರಯಾಣ ಸಾಧ್ಯ. ಆದರೆ ಇಬ್ಬರು ಪ್ರಯಾಣಿಸುವ ಸ್ಕೂಟರ್‌ನಲ್ಲಿ 6 ಮಂದಿ ಪ್ರಯಾಣಿಸಿ ಹುಚ್ಚಾಟ ಮೆರೆದಿದ್ದಾರೆ.

6ನೇ ವ್ಯಕ್ತಿಗೆ ಜಾಗವಿಲ್ಲದೆ ನಿಂತು ಪ್ರಯಾಣ
ಯುವಕರ ಗುಂಪಿನ ಹುಚ್ಚಾಟ ಎಷ್ಟಿತ್ತು ಎಂದರೆ ಆರನೇ ವ್ಯಕ್ತಿಗೆ ಕೂರಲು ಜಾಗವೇ ಇರಲಿಲ್ಲ. ಹೀಗಾಗಿ ಐದನೇ ವ್ಯಕ್ತಿಯನ್ನು ಹಿಡಿದು ನಿಂತುಕೊಂಡು ಪ್ರಯಾಣ ಮಾಡಿದ್ದಾನೆ. ಕೆಲವು ಸಂದರ್ಭಗಳಲ್ಲಿ ಐದನೇ ವ್ಯಕ್ತಿಯ ಬೆನ್ನ ಮೇಲೆ ಕುಳಿತು ಪ್ರಯಾಣ ಮಾಡಿದ್ದಾನೆ. ಹಲವರು ಸ್ಕೂಟರ್‌ನಲ್ಲಿ ಆರು ಮಂದಿ ಪ್ರಯಾಣ ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ನಿಯಮ ಉಲ್ಲಂಘಿಸಿದ ಯುುವಕರ ಗುಂಪು ಈ ದುಸ್ಸಾಹಸ ಮಾಡಿದೆ.
ಮೆತ್ತಿಕೆರೆ ಬಳಿ ಯುವಕರಿಂದ ಹುಚ್ಚಾಟ
ಸ್ಕೂಟರ್ ಮೂಲಕ ಆರು ಮಂದಿ ಪ್ರಯಾಣಿಸದ ಘಟನೆ ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ನಡೆದಿದೆ. ಅಪಾಯಾಕಾರಿ ರೈಡ್ ಮಾಡಿ ಹಲವು ನಿಯಮ ಉಲ್ಲಂಘಿಸಿದ್ದಾರೆ. ನಿಯಮಕ್ಕಿಂತ ಹೆಚ್ಚಿನ ಮಂದಿ ಪ್ರಯಾಣ, ಅಪಾಯಕಾರಿ ರೀತಿಯಲ್ಲಿ ರೈಡಿಂಗ್, ಹೆಲ್ಮೆಟ್ ಇಲ್ಲದೆ ರೈಡ್ ಸೇರಿದಂತೆ ಹಲವು ನಿಯಮ ಉಲ್ಲಂಘಿಸಿದ್ದಾರೆ. ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಎದುರಾಗಲಿದೆ. ಸ್ಥಳೀಯರು ಮೊಬೈಲ್‌ನಲ್ಲಿ ಈ ದೃಶ್ಯಗಳು ಸೆರೆಯಾಗಿದೆ.
ಬೆಂಗಳೂರಿನ ಕೆಲೆವೆಡೆ ಈ ರೀತಿ ನಿಯಮ ಉಲ್ಲಂಘಿಸುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಎಐ ಕ್ಯಾಮೆರಾ, ಎಐ ಕಂಟ್ರೋಲ್ ರೂಂ ಮೂಲಕ ಬೆಂಗಳೂರಿನಲ್ಲಿ ಟ್ರಾಫಿಕ್ ಹಾಗೂ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹೀಗಾಗಿಯೇ ಪ್ರತಿ ದಿನ ಬೆಂಗಳೂರಿನಲ್ಲಿ ಸರಾಸರಿ 30 ಸಾವಿರಕ್ಕೂ ಅಧಿಕ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದೆ. ಹಲವು ದೂರುಗಳು ದಾಖಲಾಗುತ್ತಿದೆ. ಟ್ರಾಫಿಕ್ ಪಾಲನೆ ನಿರ್ಲಕ್ಷ್ಯದಿಂದ ಅವಘಡಗಳು ಸಂಭವಿಸುತ್ತಿದೆ. ಇದು ಮತ್ತಷ್ಟು ಅಪಾಯಕಾರಿಯಾಗಿದೆ.
