ನಿಯಮಕ್ಕೆ ಬಗ್ಗದ ಸಾಗಾಟ: ಮಹಾನಗರ ರಸ್ತೆಗಳ ಮೇಲೆ ಜೀವದ ಚೆಲ್ಲಾಟ

ಮಹಾನಗರ: ಒಂದು ಕಡೆ ಸರಕು ವಾಹನಗಳಲ್ಲಿ ಓವರ್ಲೋಡ್, ಇನ್ನೊಂದು ಕಡೆ ಪ್ರಯಾಣಿಕ ವಾಹನಗಳಲ್ಲೂ ಸರಕು ಸಾಗಣೆ.. ಹೀಗೆ ಎರಡೂ ಕಡೆಗಳಲ್ಲಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಈ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುವುದು ಹೆಚ್ಚುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನ, ಇತರ ಲಘುವಾಹನಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಾಟ ಭಾರಿ ಆತಂಕಕ್ಕೆ ಕಾರಣವಾಗಿದೆ.
ಟೆಂಪೋ ರಿಕ್ಷಾಗಳಲ್ಲಿ ದೊಡ್ಡ ಗಾತ್ರದ ಸರಳುಗಳನ್ನು ಹೇರಿಕೊಂಡು ಹೋಗುವ ದೃಶ್ಯಗಳು ನಗರದಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಸರಳುಗಳು ವಾಹನದಿಂದ ಹಿಂದಕ್ಕೆ ಮತ್ತು ಮುಂದಕ್ಕೆ ಚಾಚಿಕೊಂಡಿರುತ್ತವೆ. ಅತ್ಯಂತ ಭಾರವಿರುವ ಈ ಸರಕುಗಳನ್ನು ಭದ್ರವಾಗಿ ಕಟ್ಟಿರುವುದೂ ಇಲ್ಲ. ಸರಳುಗಳ ಒಂದು ಭಾಗ ತುಂಬಾ ಚೂಪಾಗಿದ್ದು ಹಿಂದಿನಿಂದ ಬರುವ ವಾಹನಗಳು, ಸವಾರರಿಗೆ ದೊಡ್ಡ ಮಟ್ಟದ ಹಾನಿ ಉಂಟು ಮಾಡಬಲ್ಲುದು. ತಿರುವುಗಳಲ್ಲಿ ಇದು ಇನ್ನೂ ಅಪಾಯಕಾರಿ.

ತೆರೆದ ವಾಹನದಲ್ಲೇ ಸಾಗಾಟ
ಮರಳು, ಮಣ್ಣು ಮತ್ತು ಕಲ್ಲು ಸಾಗಾಟದ ವೇಳೆ ಯಾವುದೇ ರಕ್ಷಣಾ ತಂತ್ರಗಳನ್ನು ಅಳವಡಿಸುವುದಿಲ್ಲ. ಇನ್ನು ಕಾಂಕ್ರಿಟ್ ಮಿಕ್ಸಿಂಗ್ ವಾಹನಗಳನ್ನು ಸಾಗಿಸುವಾಗ ಸಿಮೆಂಟ್ ಮಿಶ್ರಿತ ನೀರು ಮತ್ತು ಧೂಳಿನ ಸಿಂಚನವಾಗುತ್ತಲೇ ಇರುತ್ತದೆ.
ಮೀನು ಲಾರಿಗಳ ನೀರು ರಸ್ತೆಗೆ
ಮೀನು ಸಾಗಾಟದ ವಾಹನಗಳಲ್ಲಿ ನೀರು ಹೊರಚೆಲ್ಲದಂತೆ ಟ್ಯಾಂಕ್ ಅಳವಡಿಸಬೇಕು ಎಂಬ ನಿಯಮವಿದೆ. ಆದರೆ, ಅದು ಪಾಲನೆಯಾಗುತ್ತಿಲ್ಲ. ನೀರೆಲ್ಲ ರಸ್ತೆಯ ಮೇಲೆ ಬೀಳುವುದಲ್ಲದೆ, ಹಿಂದಿನಿಂದ ಬರುವ ವಾಹನಗಳು, ಅಕ್ಕಪಕ್ಕದಲ್ಲಿ ಸಂಚರಿಸುವವರಿಗೆ ಸಂಕಷ್ಟ ತಂದಿಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ವಾಸನೆ ಯುಕ್ತ ನೀರಿನ ದುರ್ಗಂಧ ರಸ್ತೆಯಲ್ಲಿ ಓಡಾಡ ದಂತೆ ಮಾಡುತ್ತದೆ. ಈ ನೀರಿನಲ್ಲಿ ಜಾರಿ ದ್ವಿಚಕ್ರ ವಾಹನಗಳು ನಿಯಂತ್ರಣ ಕಳೆದುಕೊಂಡ ಘಟನೆಗಳೂ ನಡೆದಿವೆ.
ದ್ವಿಚಕ್ರ ವಾಹನದಲ್ಲೂ ಮೂಟೆ
ಸರಕು ಸಾಗಾಟ ವಾಹನಗಳಲ್ಲಿ ಮಾತ್ರವಲ್ಲ, ದ್ವಿಚಕ್ರ ವಾಹನಗಳಲ್ಲೂ ಇತ್ತೀಚೆಗೆ ಓವರ್ಲೋಡ್ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಗೋಣಿಚೀಲ, ಬಾಕ್ಸ್ಗಳಲ್ಲಿ ಅಪಾಯಕಾರಿಯಾಗಿ ಸಾಮಗ್ರಿಗಳನ್ನು ಸಾಗಾಟ ಮಾಡುವುದು, ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಹೋಗುತ್ತಿರುವುದು ವ್ಯಾಪಕವಾಗುತ್ತಿದೆ.
ಸಾಮರ್ಥ್ಯ ಮೀರಿ ಸಾಗಾಟ
ವಾಹನಗಳ ಸಾಮರ್ಥ್ಯ, ಗಾತ್ರಕ್ಕಿಂತ ಹೆಚ್ಚು ಪಟ್ಟು ಸರಕುಗಳನ್ನು ಸಾಗಿಸುವುದು ಕೂಡ ವ್ಯಾಪಕವಾಗಿದೆ. ವಾಹನಗಳಿಗೆ ತುಂಬಿಸಿದ ಸರಕುಗಳು ಮೀರಿ ಹೊರಗೆ ಚಾಚಿರುತ್ತವೆ. ಆ ವಾಹನಗಳ ಅಕ್ಕಪಕ್ಕದಲ್ಲಿ ಸಂಚರಿಸುವ ಇತರ ವಾಹನಗಳು ಅದರಿಂದ ಅಪಾಯಕ್ಕೀಡಾಗುತ್ತವೆ. ನೀರಿನ ಟ್ಯಾಂಕರ್ಗಳಿಂದ ನೀರು ರಭಸವಾಗಿ ರಸ್ತೆಗೆ ಸುರಿಯುತ್ತಿದ್ದರೂ ಚಾಲಕರಿಗೆ ಪರಿವೆಯೇ ಇರುವುದಿಲ್ಲ.
