ನೆಲಮಂಗಲ ಟೋಲ್ ಬಳಿ ಅತಿರೇಕದ ಬೈಕ್ ಸವಾರಿ: ವಿಡಿಯೋ ವೈರಲ್, ಪೊಲೀಸರಿಂದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಟೋಲ್ ಬಳಿ ದ್ವಿಚಕ್ರ ವಾಹನವೊಂದರಲ್ಲಿ ಮೂವರು ಕುಳಿತುಕೊಂಡು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಿದ್ದ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ. ಹಿಂಬದಿಯ ವಾಹನ ಸವಾರರು, ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಅಡ್ಡಾದಿಡ್ಡಿ ಚಾಲನೆ ಮಾಡುತ್ತಿರುವುದು, ನಂಬರ್ ಪ್ಲೇಟ್ ಕಾಣದಂತೆ ಹಿಂಬದಿ ಸವಾರ ಕೈಯಲ್ಲಿ ಮರೆ ಮಾಡಿರುವುದು ಹಾಗೂ ಅಶ್ಲೀಲ ಸನ್ನೆ ತೋರಿಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಮೂವರು ಯುವಕರು ಒಂದೇ ಬೈಕ್‌ನಲ್ಲಿ ಅಕ್ಕಪಕ್ಕದ ವಾಹನ ಸವಾರರಿಗೆ ಭಯ ಹುಟ್ಟಿಸುವಂತೆ ಹಾಗೂ ಅಪಘಾತಕ್ಕೆ ದಾರಿ ಮಾಡಿಕೊಡುವಂತೆ ಜಿಗ್ ಜ್ಯಾಗ್ ಮಾದರಿಯಲ್ಲಿ ವಾಹನ ಚಲಾಯಿಸುತ್ತಿದ್ದರು. ಇದನ್ನು ಹಿಂದಿನ ವಾಹನ ಸವಾರರು, ಚಿತ್ರೀಕರಣ ಮಾಡಲು ಪ್ರಾರಂಭಿಸಿದಾಗ ಅವರಿಗೆ ನಿಂದನಾತ್ಮಕ ಸನ್ನೆಗಳನ್ನು ತೋರಿಸಿದ್ದಾರೆ. ವಾಹನ ನೋಂದಣಿ ಸಂಖ್ಯೆ ಕಾಣಬಾರದೆಂದು ಚಲಾಯಿಸುತ್ತಿರುವ ಬೈಕ್ ಮೇಲೆಯೇ ಮಲಗಿ ತನ್ನ ಎರಡು ಕೈಗಳಿಂದ ನಂಬರ್ ಪ್ಲೇಟ್ ಅನ್ನು ಮುಚ್ಚಿಕೊಳ್ಳುತ್ತಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನೆಲಮಂಗಲ ಸಂಚಾರ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.