ಬಾಲಕಿಯ ಸೂಟ್‌ಕೇಸ್ ಹ*ತ್ಯೆ ಪ್ರಕರಣದ ಕಾರಣ ಬಹಿರಂಗ

ಬೆಂಗಳೂರು:ಬೆಂಗಳೂರಿನ ಹೊರವಲಯದಲ್ಲಿ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದ್ದ ಆಪ್ರಾಪ್ತೆ ಶವ ಪತ್ತೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದು, ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ದುರುಳರು ಆಕೆಯನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರಿನ ಆನೇಕಲ್ (Anekal) ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣವನ್ನು ಸೂರ್ಯನಗರ ಠಾಣಾ ಪೊಲೀಸರು ಕೊನೆಗೂ ಭೇದಿಸಿದ್ದು, ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿ ಶವವನ್ನು ಸೂಟಕೇಸ್ನಲ್ಲಿ ಹಾಕಿ ರೈಲ್ವೆ ಹಳಿ ಪಕ್ಕದಲ್ಲಿ ಎಸದು ಹೋಗಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಕಳೆದ ಮೇ ತಿಂಗಳ 21ರಂದು ಬೆಂಗಳೂರಿನ ಹೊರವಲಯದಲ್ಲಿರುವ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ ಅನುಮಾನಾಸ್ಪದ ಸೂಟ್ ಕೇಸ್ ಪತ್ತೆಯಾಗಿತ್ತು. ಸ್ಥಳೀಯರು ಅದನ್ನು ತೆಗೆದು ನೋಡಿದಾಗ ಅದರಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಸ್ಥಳೀಯರು ಆರಂಭದಲ್ಲಿ ಇದನ್ನು ರೈಲಿನಿಂದ ತಂದು ಬಿಸಾಡಿರಬಹುದು ಎಂದು ಭಾವಿಸಿದ್ದರು. ಆದರೆ ಈ ಪ್ರಕರಣದ ಬೆನ್ನು ಹತ್ತಿದ್ದ ಸೂರ್ಯನಗರ ಪೊಲೀಸ್ ಠಾಣಾ ಅಧಿಕಾರಿಗಳು ಕೊನೆಗೂ ಪ್ರಕರಣ ಭೇದಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳಾದ ಬಿಹಾರ ಮೂಲದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೇ 20ರಂದು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆಗಿದ್ದೇನು?
ಪ್ರಕರಣ ಮುಖ್ಯ ಆರೋಪಿ ಅಂದರೆ ಎ1 ಆಶೀಕ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದನು. ಆಶೀಕ್ ಕುಮಾರ್ ಮೇ 13ರಂದು ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ್ದನು. ಎರಡೇ ದಿನದಲ್ಲಿ ಪಕ್ಕದ ಗ್ರಾಮದ ಬಾಲಕಿಯನ್ನು ಬಲೆಗೆ ಕೆಡವಿಕೊಂಡಿದ್ದನು. ಮೇ 15ರಂದು ಆಶೀಕ್ ಕುಮಾರ್ ಬಾಲಕಿಯನ್ನು ಕರೆದುಕೊಂಡು ಬಿಹಾರದಿಂದ ಬೆಂಗಳೂರಿಗೆ ಹೊರಟಿದ್ದಾನೆ. ಮೇ 18ರಂದು ಇಬ್ಬರೂ ಬೆಂಗಳೂರಿಗೆ ತಲುಪಿದ್ದಾರೆ. ಅಂದು ಬಾಲಕಿ ಜೊತೆ ಆಶೀಕ್ ಕುಮಾರ್ ಬೆಂಗಳೂರು ನಗರ ಸುತ್ತಾಡಿದ್ದಾನೆ. ಆರೋಪಿ ಆಶೀಕ್ ಕುಮಾರ್ ಅದೇ ದಿನ ರಾತ್ರಿ ಸಂಬಂಧಿ ಮುಖೇಶ್ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ.
ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಜಗಳ, ಕೊಲೆ
ಮರುದಿನ ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆಕೆಯ ಜೊತೆಗೆ ಜಗಳವಾಡಿದ್ದಾನೆ. ನಂತರ, ಆಶೀಕ್ ಕುಮಾರ್ ಬಿಯರ್ ಬಾಟಲ್ನಿಂದ ಯುವತಿಯ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿದ್ದಾನೆ. ಬಳಿಕ ರಾಡ್ನಿಂದಲೂ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಆಶೀಕ್ ಕುಮಾರ್ ಬಾಲಕಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಾಲಕಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಆಶೀಕ್ ಕುಮಾರ್ ಸಂಬಂಧಿಗಳಿಗೆ ವಿಚಾರ ತಿಳಿಸಿದ್ದಾನೆ.
ಶವ ಸೂಟ್ ಕೇಸ್ ಗೆ ತುಂಬಿದ ಸ್ನೇಹಿತರು
ಕೊಲೆ ಬಳಿಕ ಆರೋಪಿಗಳು ಬಾಲಕಿಯ ಶವವನ್ನು ಸೂಟ್ಕೇಸ್ನಲ್ಲಿ ಹಾಕಿದ್ದಾರೆ. ಎಲ್ಲರೂ ಸೇರಿಕೊಂಡು ಕ್ಯಾಬ್ನಲ್ಲಿ ಬಾಲಕಿಯ ಶವ ತೆಗೆದುಕೊಂಡು ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಬಂದಿದ್ದಾರೆ. ರೈಲು ಹಳಿಯಿಂದ ಕೆಳಕ್ಕೆ ಸೂಟ್‌ಕೇಸ್ ಎಸೆದು ಎಲ್ಲ ಏಳೂ ಆರೋಪಿಗಳು ಬಿಹಾರಕ್ಕೆ ಪರಾರಿಯಾಗಿದ್ದರು.
ಸಿಸಿಟಿವಿಯಲ್ಲಿ ದುರುಳರ ಕೃತ್ಯ ಸೆರೆ
ಸೂಟ್ಕೇಸ್ನಲ್ಲಿ ಬಾಲಕಿ ಶವ ಸಿಕ್ಕ ಪ್ರಕರಣವನ್ನು ಸೂರ್ಯನಗರ ಠಾಣೆ ಪೊಲೀಸರು ಪೋಕ್ಸೋ ಅಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆರೋಪಿಗಳು ಸೂಟ್ಕೇಸ್ನಲ್ಲಿ ಶವ ಸಾಗಿಸುವ ದೃಶ್ಯಗಳು ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯ ಆಧರಿಸಿ, ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು, ಬಿಹಾರದಲ್ಲಿ ಏಳೂ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸೂರ್ಯನಗರ ಠಾಣೆಯ ಪೊಲೀಸರಿಂದ ತನಿಖೆ ಮುಂದುವರೆದಿದೆ.
