RCB ಮಾರಾಟಕ್ಕೆ ಡಿಯಾಜಿಯೊ ಅಧಿಕೃತ ಘೋಷಣೆ: ಮುಂದಿನ ವರ್ಷ ಮಾರ್ಚ್ 31 ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣ

ಮುಂಬೈ: ಅಧಿಕೃತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವನ್ನು ಡಿಯಾಜಿಯೊ (Diageo) ಮಾರಾಟ ಮಾಡಲಿದೆ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ಹೇಳಿದೆ.

ಮುಂದಿನ ವರ್ಷದ ಮಾರ್ಚ್ 31 ರ ಒಳಗಡೆ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಬಾಂಬೆ ಸ್ಟಾಕ್ ಎಕ್ಸ್ಚೆಂಜ್ಗೆ (BSE) ಯುನೈಟೆಡ್ ಸ್ಪಿರಿಟ್ಸ್ ತಿಳಿಸಿದೆ.
ಯುಎಸ್ಎಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಪ್ರವೀಣ್ ಸೋಮೇಶ್ವರ್, ಆರ್ಸಿಬಿ ನಮ್ಮ ಕಂಪನಿಗೆ ಅಮೂಲ್ಯವಾದ ಆಸ್ತಿಯಾಗಿದ್ದರೂ, ಅದು ನಮ್ಮ ವ್ಯವಹಾರಕ್ಕೆ ಪ್ರಮುಖವಲ್ಲ ಎಂದು ಹೇಳಿದ್ದಾರೆ.
ಈ ವರ್ಷ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಆರ್ಸಿಬಿ ಅತ್ಯಂತ ಮೌಲ್ಯಯುತ ತಂಡಗಳಲ್ಲಿ ಒಂದಾಗಿದೆ. ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ಆರ್ಸಿಬಿಯನ್ನು ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿ ಎಂದು ಶ್ರೇಣೀಕರಿಸಿದೆ. ಚಾಂಪಿಯನ್ಶಿಪ್ ವಿಜಯದ ನಂತರ ಅದರ ಮೌಲ್ಯ ಸುಮಾರು 269 ಮಿಲಿಯನ್ ಡಾಲರ್ಗೆ (ಅಂದಾಜು 23 ಸಾವಿರ ಡಾಲರ್) ಏರಿಕೆಯಾಗಿದೆ ಎಂದು ಅಂದಾಜಿಸಿದೆ. ಪುರುಷರ ಮತ್ತು ಮಹಿಳೆಯರ ಎರಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕಾರಣ ಈಗ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ.
ಖರೀದಿಗೆ ಯಾರೆಲ್ಲಾ ಆಸಕ್ತಿ ತೋರಿಸಿದ್ದಾರೆ?
ಆರ್ಸಿಬಿಯನ್ನು ಖರೀದಿಸಲು ಹಲವು ಸಂಸ್ಥೆಗಳು ಆಸಕ್ತಿಯನ್ನು ತೋರಿಸಿವೆ. ಅಮೆರಿಕ ಮೂಲದ ಖಾಸಗಿ ಹೂಡಿಕೆ ಸಂಸ್ಥೆ, ಅದಾನಿ ಗ್ರೂಪ್, ಜಿಂದಾಲ್ ಕುಟುಂಬದ ನೇತೃತ್ವದ ಜೆಎಸ್ಡಬ್ಲ್ಯೂ ಗ್ರೂಪ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಆದರ್ ಪೂನಾವಲ ಮತ್ತು ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ನ ರವಿ ಜೈಪುರಿಯಾ ಖರೀದಿಸಲು ಆಸಕ್ತಿ ತೋರಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮೌಲ್ಯ 17 ಸಾವಿರ ಕೋಟಿ ರೂ., ಮಹಿಳಾ ತಂಡದ ಮೌಲ್ಯ 3 ರಿಂದ 5 ಸಾವಿರ ಕೋಟಿ ರೂ. ಲೆಕ್ಕ ಹಾಕಿ ಡಿಯಾಜಿಯೋ ಒಟ್ಟು 25 ಸಾವಿರ ಕೋಟಿ ರೂ. ಅಂದಾಜಿಸಿದೆ.
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಯುನೈಟೆಡ್ ಸ್ಪಿರಿಟ್ಸ್ ಹೂಡಿಕೆದಾರರು ಆತಂಕ ಹೊರಹಾಕಿದ್ದರು. ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ಗೆ ನಿವೃತ್ತಿ ಹೇಳುವ ಸಾಧ್ಯತೆಯಿದೆ. ಕೊಹ್ಲಿ ನಿವೃತ್ತಿ ಹೇಳಿದರೆ ಆರ್ಸಿಬಿ ಮೌಲ್ಯ ಕುಸಿಯುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮುಂದಿನ ವರ್ಷದ ಒಳಗಡೆ ಆರ್ಸಿಬಿ ತಂಡವನ್ನು ಮಾರಾಟ ಮಾಡಲು ಯುನೈಟೆಡ್ ಸ್ಪಿರಿಟ್ಸ್ ಮುಂದಾಗಿದೆ ಎನ್ನಲಾಗುತ್ತಿದೆ.
ಡಿಯಾಜಿಯೊ ತೆಕ್ಕೆಗೆ ಆರ್ಸಿಬಿ ಹೋಗಿದ್ದು ಹೇಗೆ?
2008 ರಲ್ಲಿ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪೀರಿಟ್ಸ್ ಆರ್ಸಿಬಿ ತಂಡವನ್ನು 111.6 ಮಿಲಿಯನ್ ಡಾಲರ್(ಆಗಿನ 700-800 ಕೋಟಿ ರೂ.) ನೀಡಿ ಖರೀದಿಸಿತ್ತು. 2012ರಲ್ಲಿ ಕಿಂಗ್ಫಿಶರ್ ಏರ್ಲೈನ್ಸ್ ಕಾರ್ಯಾಚರಣೆ ನಿಲ್ಲಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇದ್ದ ಕಾರಣ ಅದರ ಮಾಲೀಕತ್ವ ಡಿಯಾಜಿಯೊಗೆ (Diageo) ಹೋಗಿತ್ತು.