ಸುಮಾರು ₹16,600 ಕೋಟಿಗೆ ಮಾರಾಟವಾಯ್ತು ಆರ್‌ಸಿಬಿ; ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ಹಾಲಿ ಚಾಂಪಿಯನ್ ತಂಡ

ಬೆಂಗಳೂರು: ಐಪಿಎಲ್‌ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್(ಎಬಿಜಿ), ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಬ್ಲಾಕ್‌ಸ್ಟೋನ್ 1.78 ಬಿಲಿಯನ್ ಯುಎಸ್ ಡಾಲರ್‌ಗೆ(ಸುಮಾರು 16,600 ಕೋಟಿ ರೂ.) ಸ್ವಾದೀನಪಡಿಸಿಕೊಳ್ಳಲು ಮುಂದಾಗಿವೆ ಎಂದು ವರದಿಯಾಗಿದೆ. ಈ ಮೂಲಕ ಆರ್‌ಸಿಬಿ ಅತ್ಯಂತ ದುಬಾರಿ ಐಪಿಎಲ್ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.
ಮಂಗಳವಾರ ಘೋಷಿಸಲಾಗಿರುವ ಆರ್‌ಸಿಬಿ ಸ್ವಾಧೀನ ಪ್ರಕ್ರಿಯೆಗೆ ಬಿಸಿಸಿಐ ಹಾಗೂ ಭಾರತೀಯ ಸ್ಪರ್ಧಾ ಆಯೋಗದಿಂದ ಔಪಚಾರಿಕ ಅನುಮೋದನೆಗಾಗಿ ಕಾಯಲಾಗುತ್ತಿದೆ.
ಆರ್‌ಸಿಬಿಯ ಪುರುಷರ ಹಾಗೂ ಮಹಿಳೆಯರ ತಂಡಗಳ ಮಾಲಕತ್ವವು ಡಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್‌ನಿಂದ ಬಿರ್ಲಾ ನೇತೃತ್ವದ ಒಕ್ಕೂಟಕ್ಕೆ ವರ್ಗಾವಣೆಯಾಗಲಿದೆ. ಲೀಗ್‌ನ 18 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಮಹತ್ವದ ಬದಲಾವಣೆಯಾಗಿದೆ.
ಹೊಸ ನಾಯಕತ್ವದಡಿಯಲ್ಲಿ ಆದಿತ್ಯ ಗ್ರೂಪ್‌ನ ನಿರ್ದೇಶಕ ಹಾಗೂ ಮಾಜಿ ವೃತ್ತಿಪರ ಕ್ರಿಕೆಟಿಗ ಆರ್ಯಮಾನ ವಿಕ್ರಮ್ ಬಿರ್ಲಾ ಫ್ರಾಂಚೈಸಿಯ ಅಧ್ಯಕ್ಷರಾಗಲಿದ್ದಾರೆ. ಟೈಮ್ಸ್ ಇಂಟರ್‌ನೆಟ್‌ನ ಅಧ್ಯಕ್ಷ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿ ನೇಮಕವಾಗಲಿದ್ದಾರೆ.
