‘ಆರ್‌ಸಿಬಿ ಕಾರಣ, ಪೊಲೀಸರಲ್ಲ’ ಎಂದ ಕೋರ್ಟ್; 11 ಜನರ ಸಾವಿಗೆ ತಂಡವೇ ಹೊಣೆ!

ಬೆಂಗಳೂರು: ಜೂನ್ 4 ರಂದು ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಗೆಲುವಿನ ವಿಜಯೋತ್ಸವ ಆಚರಣೆ ಮಾಡುವಾಗ 11 ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಹಲವಾರು ಜನರ ಗಾಯಕ್ಕೆ ಕಾರಣವಾದ ಕಾಲ್ತುಳಿತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಪ್ರಮುಖ ಕಾರಣ ಎಂದು ಎಂದು ಕೋರ್ಟ್ ಚಾಟಿ ಬೀಸಿದೆ.

ಪೊಲೀಸರ ಪಾತ್ರವನ್ನು ಸಮರ್ಥಿಸಿಕೊಂಡ ಪೀಠ, ‘ಪೊಲೀಸ್ ಸಿಬ್ಬಂದಿ ಕೂಡ ಮನುಷ್ಯರೇ. ಅವರು ದೇವರಲ್ಲ ಅಥವಾ ಮಾಂತ್ರಿಕರೂ ಅಲ್ಲ.. ಅಲ್ಲಾದ್ದೀನ್ ಕಾ ಚಿರಾಗ್ನಂತಹ ಮಾಂತ್ರಿಕ ಶಕ್ತಿಯನ್ನು ಹೊಂದಿಲ್ಲ. ಸುಮಾರು ಮೂರರಿಂದ ಐದು ಲಕ್ಷ ಜನರ ಸಭೆ ಸೇರಲು ಆರ್‌ಸಿಬಿ ಕಾರಣ ಎನ್ನಿಸುತ್ತಿದೆ. ಆರ್‌ಸಿಬಿ ಪೊಲೀಸರಿಂದ ಸೂಕ್ತ ಅನುಮತಿ ಪಡೆಯಲಿಲ್ಲ. ಇದ್ದಕ್ಕಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಜನರು ಒಟ್ಟುಗೂಡಿದರು’ ಎಂದು ಕೋರ್ಟ್ ಹೇಳಿದೆ.

ಪೊಲೀಸರಿಗೆ ಸಿದ್ಧತೆಗಳ ಮಾಡಿಕೊಳ್ಳಲು ಸಮಯವನ್ನೇ ನೀಡಲಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ. ‘ಜೂನ್ 4, 2025 ರಂದು ಸಮಯದ ಕೊರತೆಯಿಂದಾಗಿ, ಪೊಲೀಸರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ಸಾಕಷ್ಟು ಸಮಯವನ್ನು ನೀಡಲಿಲ್ಲ’ ಎಂದು ಕೋರ್ಟ್ ಹೇಳಿದೆ.
ಆರ್ಸಿಬಿ ಐಪಿಎಲ್ ಗೆದ್ದ ಜೂನ್ 3 ಮತ್ತು 4ರ ನಡುವಿನ ರಾತ್ರಿಯಂದು ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಪೊಲೀಸರು ಭದ್ರತೆ ನೀಡುವಲ್ಲಿ ನಿರತರಾಗಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅದಾದ ಮರುದಿನವೇ ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ಕೋರ್ಟ್ ಹೇಳಿದೆ.
