ರಣಜಿ ಟ್ರೋಫಿ 2025: ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ! ಒಂದೇ ದಿನ, ಒಂದೇ ಹೆಸರಿನ ಇಬ್ಬರು ‘ಆಯುಷ್’ಗಳಿಂದ ದ್ವಿಶತಕ ಸಿಡಿತ

Ranji Trophy 2025: 2025 ರ ರಣಜಿ ಟ್ರೋಫಿಯಲ್ಲಿ ಒಂದೇ ದಿನ, ಒಂದೇ ಹೆಸರಿನ ಇಬ್ಬರು ಆಟಗಾರರು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಬಿಹಾರದ ಆಯುಷ್ ಆನಂದ್ ಲೋಹರುಕ ಅರುಣಾಚಲ ಪ್ರದೇಶ ವಿರುದ್ಧ 226 ರನ್ ಬಾರಿಸಿದರೆ, ದೆಹಲಿಯ ಆಯುಷ್ ಸುಮಿತ್ ದೋಸೆಜಾ ಹೈದರಾಬಾದ್ ವಿರುದ್ಧ 209 ರನ್ ಗಳಿಸಿದರು.
2025 ರ ರಣಜಿ ಟ್ರೋಫಿಯ (Ranji Trophy 2025) ಎರಡನೇ ದಿನದಾಟದಂದೂ ಬೇರೆ ಬೇರೆ ತಂಡದ ಪರ ಆಡುತ್ತಿರುವ ಒಂದೇ ಹೆಸರಿನ ಇಬ್ಬರು ಆಟಗಾರರು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಮೊದಲನೇ ದ್ವಿಶತಕವನ್ನು ಬಿಹಾರ ತಂಡದ ಪರ ಆಡುತ್ತಿರುವ ಆಯುಷ್ ಆನಂದ್ ಲೋಹರುಕ (Ayush Loharuka) ಅರುಣಾಚಲ ಪ್ರದೇಶ ತಂಡದ ವಿರುದ್ಧ ಬಾರಿಸಿದರೆ, ಎರಡನೇ ದ್ವಿಶತಕವನ್ನು ಡೆಲ್ಲಿ ಪರ ಆಡುತ್ತಿರುವ ಆಯುಷ್ ಸುಮಿತ್ ದೋಸೆಜಾ (Ayush Doseja) ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದಾಖಲಿಸಿದ್ದಾರೆ. ಇವರಿಬ್ಬರ ದ್ವಿಶತಕದ ಇನ್ನಿಂಗ್ಸ್ನಿಂದಾಗಿ ಎರಡೂ ತಂಡಗಳು ಪಂದ್ಯದಲ್ಲಿ ಭಿಗಿ ಹಿಡಿತ ಸಾಧಿಸಿವೆ

ಮೊದಲಿಗೆ ಬಿಹಾರದ ಪಾಟ್ನಾದಲ್ಲಿರುವ ಮೊಯಿನ್-ಉಲ್-ಹಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ ತಂಡವನ್ನು 105 ರನ್ಗಳಿಗೆ ಆಲೌಟ್ ಮಾಡಿದ ಬಿಹಾರ ತಂಡ, ತನ್ನ ಮೊದಲ ಇನ್ನಿಂಗ್ಸ್ ಅನ್ನು 542 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ಆಯುಷ್ ಆನಂದ್ ದ್ವಿಶತಕ
ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ಆಯುಷ್ ಆನಂದ್ ಲೋಹರುಕ 247 ಎಸೆತಗಳಲ್ಲಿ 37 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 226 ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ ಅರ್ನವ್ ನವಲ್ ಕಿಶೋರ್ (52), ಸಕಿಬುಲ್ ಗನಿ (59), ಬಿಪಿನ್ ಸೌರಭ್ (52), ಸಚಿನ್ ಕುಮಾರ್ (75) ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹೀಗಾಗಿ ತಂಡ ಬೃಹತ್ ಮೊತ್ತ ಕಲೆಹಾಕಿತು.
ಆಯುಷ್ ಸುಮಿತ್ ದ್ವಿಶತಕ
ಇತ್ತ ದೆಹಲಿ ಹಾಗೂ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ದೆಹಲಿ ತಂಡ ಎರಡನೇ ದಿನದಾಟದ ಟೀ ವಿರಾಮದ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು 474 ರನ್ ಕಲೆಹಾಕಿದೆ. ತಂಡದ ಪರ ಇದುವರೆಗೆ ಅತ್ಯಧಿಕ ಇನ್ನಿಂಗ್ಸ್ ಆಡಿರುವ ಆಯುಷ್ ಸುಮಿತ್ ದೋಸೆಜಾ 279 ಎಸೆತಗಳಲ್ಲಿ 25 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 209 ರನ್ ಕಲೆಹಾಕಿದ್ದಾರೆ. ಹಾಗೆಯೇ ದ್ವಿಶತಕದಂಚಿನಲ್ಲಿರುವ ಮತ್ತೊಬ್ಬ ಆಟಗಾರ ಸನತ್ ಸಾಂಗ್ವಾನ್ ಕೂಡ ಇದುವರೆಗೆ 448 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 175 ರನ್ ಬಾರಿಸಿದ್ದಾರೆ.