ಅಭಿಮಾನಿಗಳಿಗಾಗಿ ವಿಮಾನದಲ್ಲಿ ಎದ್ದು ನಿಂತ ರಜನಿಕಾಂತ್: ವಿಡಿಯೋ ವೈರಲ್

ರಜನಿಕಾಂತ್ (Rajinikanth) ಅವರಿಗೆ ಅಭಿಮಾನಿಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಎಲ್ಲಾದರೂ ಫ್ಯಾನ್ಸ್ ಕಂಡರೆ ಅವರು ಕನಿಷ್ಠ ಒಂದು ಹಾಯ್ ಆದರೂ ಹೇಳುತ್ತಾರೆ. ಸೆಲ್ಫಿ ಕೇಳಿದರೆ ಖುಷಿಯಿಂದ ನೀಡುತ್ತಾರೆ. ಈ ಮೊದಲು ಶೂಟಿಂಗ್ ಸ್ಥಳದಿಂದ ಕಾರಿನಲ್ಲಿ ತೆರಳುವಾಗ ರಸ್ತೆಯ ಎರಡೂ ಬದಿಗೆ ನಿಲ್ಲುವ ಅಭಿಮಾನಿಗಳಿಗೆ ಅವರು ಸನ್ ರೂಫ್ ಮೂಲಕ ಮೇಲೆದ್ದು, ಕೈ ಬೀಸಿ ಹೋದ ಉದಾಹರಣೆ ಇದೆ.

ಈಗ ಅವರು ವಿಮಾನದಲ್ಲಿ ನಡೆದುಕೊಂಡ ಒಂದು ಘಟನೆ ಸಾಕಷ್ಟು ಮೆಚ್ಚುಗೆ ಪಡೆದಿದೆ.
ರಜನಿಕಾಂತ್ ಅವರು ಇತ್ತೀಚೆಗೆ ಮಗಳು ಐಶ್ವರ್ಯಾ ಜೊತೆ ಚೆನ್ನೈನಿಂದ ಹೈದರಾಬಾದ್ಗೆ ತೆರಳುವವರಿದ್ದರು. ಎಕಾನಮಿ ಕ್ಲಾಸ್ನಲ್ಲಿ ಅವರು ಪ್ರಯಾಣ ಮಾಡುವವರಿದ್ದರು. ಅವರು ಬಂದು ಕುಳಿತುಕೊಳ್ಳುತ್ತಿದ್ದಂತೆ ಕೆಲ ಫ್ಯಾನ್ಸ್ ‘ತಲೈವಾ ನಿಮ್ಮ ಮುಖ ನೋಡಬೇಕು’ ಎಂದು ಬೇಡಿಕೆ ಇಟ್ಟರು. ಈ ವೇಳೆ ರಜನಿಕಾಂತ್ ನಡೆದುಕೊಂಡ ರೀತಿ ಅನೇಕರ ಮೆಚ್ಚುಗೆಗೆ ಕಾರಣ ಆಗಿದೆ.
ರಜನಿಕಾಂತ್ಗೆ ಅಭಿಮಾನಿಗಳಿಂದ ಈ ಮನವಿ ಬರುತ್ತಿದ್ದಂತೆ ಅವರು ವಿಳಂಬ ಮಾಡಲೇ ಇಲ್ಲ. ಎದ್ದು ನಿಂತು ಫ್ಯಾನ್ಸ್ ಕಡೆ ಕೈ ಬೀಸಿದರು. ನಂತರ ಎಲ್ಲರಿಗೂ ಕೈ ಮುಗಿದರು. ಸದ್ಯ ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಗತ್ತಿದೆ. ಆಗ ಅಲ್ಲಿ ನೆರೆದ ಅಭಿಮಾನಿಗಳು ಖುಷಿಯಿಂದ ಕೂಗಿದರು. ರಜನಿಯನ್ನು ಹತ್ತಿರದಿಂದ ನೋಡಿ ಅವರಿಗೆ ಖುಷಿ ಆಯಿತು
ರಜನಿಕಾಂತ್ ಅವರು ವಿವಿಧ ಕೆಲಸಕ್ಕೆ ನಾನಾ ನಗರಕ್ಕೆ ತೆರಳುತ್ತಾ ಇರುತ್ತಾರೆ. ಅವರು ವೈಯಕ್ತಿಕ ಕೆಲಸದ ಉದ್ದೇಶಕ್ಕೆ ಹೈದರಾಬಾದ್ ತೆರಳಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಇದನ್ನು ನಿರ್ಮಾಣ ಮಾಡಿದೆ. ತೆಲುಗಿನ ನಾಗಾರ್ಜುನ, ಕನ್ನಡದ ಉಪೇಂದ್ರ, ಹಿಂದಿಯ ಆಮಿರ್ ಖಾನ್, ಮಲಯಾಳಂನ ಸೌಬಿನ್ ಶಾಹಿರ್ ಈ ಚಿತ್ರದ ಭಾಗ ಆಗಿದ್ದಾರೆ. ಶ್ರುತಿ ಹಾಸನ್ ಈ ಚಿತ್ರಕ್ಕೆ ನಾಯಕಿ. ‘ವಾರ್ 2’ ಸಿನಿಮಾ ಎದುರು ‘ಕೂಲಿ’ ಬಿಡುಗಡೆ ಆಗಲಿದೆ.
