ಟೀಕೆಗಳಿಗೆ ರಾಜ್ ಕುಂದ್ರಾ ಖಡಕ್ ತಿರುಗೇಟು: ‘ಮಾನವೀಯತೆಯು ಒಂದು ತಂತ್ರವೇ ಆದರೆ ಹೆಚ್ಚೆಚ್ಚು ಜನ ಅಳವಡಿಸಿಕೊಳ್ಳಲಿ

ಉತ್ತರ ಪ್ರದೇಶದ ಮಥುರಾದಲ್ಲಿರುವ ವೃಂದಾವನದ ಶ್ರೀ ಹಿತ್ ರಾಧಾ ಕೇಲಿ ಕುಂಜ್ ಆಶ್ರಮದ ಪ್ರೇಮಾನಂದ್ ಜಿ ಮಹಾರಾಜ್ (Premanand Maharaj) ಅವರನ್ನ ಹಲವು ಗಣ್ಯರು ಆಗಾಗ ಭೇಟಿಯಾಗುತ್ತಾರೆ. ಅವರ ಆಶೀರ್ವಾದ ಪಡೆಯುತ್ತಾರೆ. ಅಧ್ಯಾತ್ಮಿಕ ಗುರು ಆಗಿರುವ ಪ್ರೇಮಾನಂದ್ ಮಹಾರಾಜ್ ಅವರ ಉಪನ್ಯಾಸ, ಬೋಧನೆಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿರುತ್ತವೆ.

ಅಪಾರ ಅನುಯಾಯಿಗಳನ್ನ ಹೊಂದಿರುವ ಪ್ರೇಮಾನಂದ ಮಹಾರಾಜ್ ಅವರನ್ನ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಆಗಾಗ ಭೇಟಿಯಾಗಿ, ಆಶೀರ್ವಾದ ಪಡೆಯೋದನ್ನ ನೋಡಿದ್ದೇವೆ..
ಇತ್ತೀಚೆಗೆ ನಟಿ ಶಿಲ್ಪಾಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಪ್ರೇಮಾನಂದ ಮಹಾರಾಜ್ ಅವರನ್ನ ಭೇಟಿಯಾಗಿದ್ದರು. ಅದಾದ ಮೇಲೆ ರಾಜ್ ಕುಂದ್ರಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ದಶಕಗಳಿಂದಲೂ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವ ಪ್ರೇಮಾನಂದ ಮಹಾರಾಜ್ ಅವರಿಗೆ ತಾವು ಕಿಡ್ನಿ ನೀಡುವುದಾಗಿ ರಾಜ್ ಕುಂದ್ರಾ ಹೇಳಿದ್ದಕ್ಕೆ ಅವರನ್ನ ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ಟ್ರೋಲ್ ಮಾಡಲಾಗುತ್ತಿದೆ. ಅನೇಕರು ರಾಜ್ ಕುಂದ್ರಾ ಅವರನ್ನ ಹೊಗಳಿದ್ದರೂ, ಮತ್ತೊಂದಷ್ಟು ಮಂದಿ ʼರಾಜ್ ಕುಂದ್ರಾ ಅವರು ಪ್ರಚಾರಕ್ಕೋಸ್ಕರ ಇಂಥ ಮಾತು ಆಡುತ್ತಿದ್ದಾರೆ. ಅವರದ್ದು ಪಬ್ಲಿಸಿಟಿ ಗೀಳುʼ ಎಂದು ಟೀಕಿಸುತ್ತಿದ್ದಾರೆ.
ರಾಜ್ ಕುಂದ್ರಾ ತಿರುಗೇಟು..!
ಪ್ರೇಮಾನಂದ ಮಹಾರಾಜ್‌ಗೆ ನಾನು ನನ್ನ ಒಂದು ಕಿಡ್ನಿ ಕೊಡಲು ಸಿದ್ಧ ಎಂದು ಹೇಳಿರುವ ರಾಜ್ ಕುಂದ್ರಾ ಇದೀಗ ತಮಗೆ ಬರುತ್ತಿರುವ ಟೀಕೆಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು ʼನಾವು ಒಂದು ವಿಚಿತ್ರ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಯಾರದ್ದಾದ್ರೂ ಜೀವ ಉಳಿಸಲು ನಾವು ನಮ್ಮದೇ ಒಂದು ಅಂಗವನ್ನ ಕೊಡುತ್ತೇವೆ ಎಂದು ಮುಂದು ಬಂದರೆ ಅದನ್ನ ಪ್ರಚಾರದ ಗೀಳು ಎಂದು ಟೀಕಿಸಲಾಗುತ್ತದೆ. ಕರುಣೆ ಪ್ರಚಾರದ ಗೀಳು ಆದರೆ, ಈ ಜಗತ್ತು ಆ ಪ್ರಚಾರವನ್ನ ಹೆಚ್ಚೆಚ್ಚು ನೋಡಲಿ. ಮಾನವೀಯತೆಯು ಒಂದು ತಂತ್ರವೇ ಆದಲ್ಲಿ, ಹೆಚ್ಚೆಚ್ಚು ಜನ ಈ ತಂತ್ರವನ್ನ ಅಳವಡಿಸಿಕೊಳ್ಳಲಿ. ಮಾಧ್ಯಮದವರು ಅಥವಾ ಟ್ರೋಲ್ ಮಾಡುವವರು ನೀಡುವ ಲೇಬಲ್‌ಗಳಿಂದ ನನ್ನನ್ನ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲʼ ಎಂದು ರಾಜ್ ಕುಂದ್ರಾ ಹೇಳಿದ್ದಾರೆ.
ಅಷ್ಟೇ ಅಲ್ಲ ʼನಾನು ಈ ಹಿಂದೆ ಹೇಗಿದ್ದೆ ಎಂಬುದು ನನ್ನ ವರ್ತಮಾನದ ಆಯ್ಕೆಗಳನ್ನ ರದ್ದುಗೊಳಿಸೋದಿಲ್ಲ. ನನ್ನ ಈಗಿನ ಉದ್ದೇಶಗಳು, ಆಶಯಗಳನ್ನ ನಿಮ್ಮ ಸಿನಿಕತನದಿಂದ ಅಳೆಯಲು ಸಾಧ್ಯವಿಲ್ಲ. ಮತ್ತೊಬ್ಬರನ್ನ ಜಡ್ಜ್ ಮಾಡುವುದನ್ನ ಬಿಟ್ಬಿಡಿ, ಹೆಚ್ಚು ಪ್ರೀತಿಸಿ – ನೀವು ಒಂದು ಜೀವವನ್ನು ಸಹ ಉಳಿಸಬಹುದುʼ ಎಂದೂ ರಾಜ್ ಕುಂದ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರಾಜ್ ಕುಂದ್ರಾ ಅವರಿಗೆ ಸದ್ಯ ಸಮಾಜದಲ್ಲಿ ಒಳ್ಳೆ ಹೆಸರಿಲ್ಲ. ಈ ಹಿಂದೆ ನೀಲಿ ಚಿತ್ರ ದಂಧೆಯ ವಿಷಯದಲ್ಲಿ ಹೆಸರು ಹಾಳು ಮಾಡಿಕೊಂಡಿದ್ದಾರೆ. ಇದೀಗ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಇಬ್ಬರೂ ಹಣ ವಂಚನೆಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಉದ್ಯಮಿ ದೀಪಕ್ ಕೊಠಾರಿ ಎಂಬುವರು ಶಿಲ್ಪಾ ಮತ್ತು ರಾಜ್ ವಿರುದ್ಧ ದೂರು ನೀಡಿದ್ದಾರೆ.