ಪತ್ನಿಯ ಒಂದೇ ಪ್ರಶ್ನೆಗೆ ಬಿಚ್ಚಿಕೊಂಡ ರಾಯಚೂರು ಕೊಲೆ ರಹಸ್ಯ: ‘ನಾಯಿಗಳು ಬೊಗಳದಿರಲು ಕೊಲೆಗಾರರು ಕುಟುಂಬಸ್ಥರೇ?’

ಬೆಳಗಾವಿ: ಹಗಲು ರಾತ್ರಿ ಎನ್ನದೇ ಮನೆಯಿಂದಾಚೆ ದುಡಿಯುವ ಪತಿಯ ಹಾವಭಾವ ಕಂಡು ಪತ್ನಿ ಏನಾದರೂ ಪ್ರಶ್ನಿಸಿದರೆ, ‘ಇದೆಂಥಾ ಪ್ರಶ್ನೆ? ನಿನಗೇಕೆ ಈ ಅನುಮಾನ?’ ಎಂದು ರೇಗಾಡುವವರೇ ಹೆಚ್ಚು. ಆದರೆ, ಕೊಲೆ ಪ್ರಕರಣ ಭೇದಿಸಲು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಸುಳಿವು ಸಿಗದೇ ಒತ್ತಡಕ್ಕೆ ಸಿಲುಕಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಅವರ ಪತ್ನಿಯಿಂದ ಎದುರಾದ ಸರಳ ಪ್ರಶ್ನೆ, ಕೊಲೆ ರಹಸ್ಯ ಅರಿಯಲು ನೆರವಾದದ್ದು ವಿಶೇಷ!

ಪತ್ನಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅಧಿಕಾರಿ ‘ಹೌದಲ್ವಾ’ ಎನ್ನುತ್ತಲೇ, ಚಾಣಾಕ್ಷತೆಯಿಂದ ನಡೆಸಿದ ತನಿಖೆ ಇದೀಗ ಇಲಾಖೆ ಗಮನ ಸೆಳೆದಿದೆ. ‘ಕುರಿ ಹೊತ್ತೊಯ್ಯುವವರ ಜತೆ ಪ್ರಾಣ ಪಣಕ್ಕಿಟ್ಟು ಸೆಣಸಾಡುವ ನಾಯಿಗಳು, ತನ್ನ ಮಾಲೀಕನ ಕೊಲೆ ಮಾಡುವಾಗ ಕನಿಷ್ಠ ಬೊಗಳಿ ಪ್ರತಿರೋಧವನ್ನೂ ತೋರಲಿಲ್ಲವೇ?’ ಎನ್ನುವುದೇ ಆ ಪ್ರಶ್ನೆಯಾಗಿತ್ತು. ಉತ್ತರ ಕಂಡುಕೊಳ್ಳಲು ಕೊಲೆ ಸನ್ನಿವೇಶ ಮರುಸೃಷ್ಟಿಸಿ ತನಿಖಾಧಿಕಾರಿ ಅನುಸರಿಸಿದ ಪ್ರತಿ ಹಂತದಲ್ಲೂ, ಆ ಕುರಿಗಾಹಿಯನ್ನು ಕುಟುಂಬದವರೇ ಕೊಲೆಗೈದಿರುವ ವಿಚಾರ ನಿರೂಪಿಸಿತು.
ಏನಿದು ಘಟನೆ?:
ಅದೊಂದು ದಿನ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕುರಿ ಮೇಯಿಸಲು ತೆರಳಿದ್ದ ಹಟ್ಟಿ ಆಲೂರಿನ ರಾಯಪ್ಪ ಸುರೇಶ ಕಮತಿ ಎಂಬ ಕುರಿಗಾಹಿಯನ್ನು, ಕಣ್ಣಿಗೆ ಖಾರದ ಪುಡಿ ಎರಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿತ್ತು. ಕತ್ತಲಾಗುವ ಮುನ್ನ ಕುರಿಗಳು ತಾವಾಗಿಯೇ ಮನೆ ತಲುಪಿದ್ದರೆ, ಅಲ್ಲೇ ಕುರಿಯೊಂದು ಜನ್ಮ ನೀಡಿದ್ದ ಮರಿಗಳ ಕಾವಲಿಗಾಗಿ ನಾಯಿಗಳು ಉಳಿದುಕೊಂಡಿದ್ದವು. ಕೊಲೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿ, ರಾಯಪ್ಪ ಅವರ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಸುಳಿವೂ ಸಿಗಲಿಲ್ಲ
ಮೂವರು ಅಣ್ಣತಮ್ಮಂದಿರಿದ್ದ ಕಮತಿ ಕುಟುಂಬದಲ್ಲಿ ರಾಯಪ್ಪನೇ ಹಿರಿಯಣ್ಣ. ವಿವಾಹಿತನಾಗಿದ್ದರೂ ತಂದೆ-ತಾಯಿ, ಇಬ್ಬರು ತಮ್ಮಂದಿರ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಬಡತನದ ಕೂಡು ಕುಟುಂಬಕ್ಕೆ ಕುರಿ ಹಿಂಡೇ ಆಧಾರವಾಗಿತ್ತು. ದುಡಿಯಲು ಹೊರದೇಶಕ್ಕೆ ತೆರಳಿದ್ದ ತಮ್ಮನೂ ಕಣ್ಮುಂದೆಯೇ ಇರಲೆಂದು ಊರಿಗೆ ಕರೆಸಿಕೊಂಡು ಇದ್ದುದರಲ್ಲೇ ನೆಮ್ಮದಿಯ ಬದುಕು ಕಂಡುಕೊಂಡಿದ್ದರು. ಈ ನಡುವೆ ರಾಯಪ್ಪ ಕೊಲೆಯಾಗಿರುವುದು ಕುಟುಂಬಕ್ಕೆ ಮಾತ್ರವಲ್ಲದೇ ಊರಿಗೂ ದಿಗಿಲು ಮೂಡಿಸಿತ್ತು.
‘ಕುರಿಯಷ್ಟೇ ಮನೆಗೆ ಬಂದಿವೆ. ಅಣ್ಣಾ ಮಾತ್ರ ಇನ್ನೂ ಬಂದಿಲ್ಲ’ ಎಂದು ಆತಂಕದಿಂದ ಕರೆ ಮಾಡಿದ ತಮ್ಮನಿಗೆ ಮತ್ತೋರ್ವ ಅಣ್ಣ ‘ಈಗಷ್ಟೇ ಸಂತೆ ಮಾಡಿಕೊಂಡು ಅಪ್ಪ-ನಾನು ಜೊತೆಗೆ ಬರುತ್ತಿದ್ದೇವೆ. ಊರಿನ ಸುತ್ತಮುತ್ತ ಹುಡುಕು’ ಎಂದಿದ್ದ. ಸ್ಥಳೀಯರು ಶವ ನೋಡಿದ ಬಳಿಕ ಕೊಲೆಯಾಗಿರುವುದು ಗೊತ್ತಾಗಿದೆ ಎನ್ನುವುದು ಪ್ರಾಥಮಿಕವಾಗಿ ಸಿಕ್ಕಿದ್ದ ಮಾಹಿತಿ. ರಾಯಪ್ಪನಿಗಿದ್ದ ವ್ಯಾವಹಾರಿಕ ತಂಟೆ ಹಾಗೂ ವಿವಾಹ ಪೂರ್ವ ಸಂಬಂಧಗಳ ಜಾಡು ಜಾಲಾಡಿ, ಎಷ್ಟೇ ಹರಸಾಹಸ ಪಟ್ಟರೂ ಹಂತಕರ ಸುಳಿವು ಸಿಕ್ಕಿರಲೇ ಇಲ್ಲ.
ಅನುಮಾನ ದಟ್ಟವಾಗಿದ್ದೆಲ್ಲಿ?:
ಕೊನೆಗೆ, ‘ಮಾಲೀಕನ ಕೊಲೆಗೈದರೂ ಶ್ವಾನಗಳೇಕೆ ಸುಮ್ಮನಿದ್ದವು? ಮಂದ ಬುದ್ಧಿಯ ಕುರಿಗಳು ತಾವಾಗಿಯೇ ಎರಡ್ಮೂರು ಕಿ.ಮೀ ದೂರದಿಂದ ಮನೆ ತಲುಪಲು ಸಾಧ್ಯವೇ?’ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಸಂಶಯ ವ್ಯಕ್ತಪಡಿಸಿ ತನಿಖೆಗೆ ಮತ್ತೊಂದು ಆಯಾಮ ತೋರಿದ್ದು ತನಿಖಾಧಿಕಾರಿಯ ಪತ್ನಿ! ಅದರಂತೆ, ತನಿಖೆ ವೇಳೆ ಸನ್ನಿವೇಶ ಮರುಸೃಷ್ಟಿಸಿ, ಕುರಿ ಹಿಂಡಿನ ಎದುರು ಸಹೋದರನಿಗೆ ಕಲ್ಲೆಸೆಯಲು ಹೋದಾಗ ತಕ್ಷಣವೇ ಶ್ವಾನಗಳು ದಾಳಿಗಿಳಿದಿವೆ. ‘ಹಾಗಾದರೆ, ಅಂದು ನಾಯಿ ಬೊಗಳದಿರಲು ಕೊಲೆಗಾರರು ಕುಟುಂಬಸ್ಥರೇ ಇರಬೇಕು; ಹೊರಗಿನವರಲ್ಲ’, ಎಂಬ ಸಂದೇಹ ಮೂಡಿದೆ. ಬಳಿಕ ಆತನನ್ನು ಶವದಂತೆ ಮಲಗಿಸಿದಾಗಲೂ ಕುರಿಗಳು ಅಲ್ಲಿಂದ ಕಾಲ್ಕೀಳಲಿಲ್ಲ. ಸಮೀಪದಲ್ಲಿದ್ದ ಕಾಲುವೆ ದಾಟಿಸಿದ ಬಳಿಕವೇ ಅವು ಮನೆಯತ್ತ ಮುಖ ಮಾಡಿದವು. ಇದರಿಂದಾಗಿ ಅಂದು ಕುರಿ ಕಳ್ಳತಕ್ಕೆ ಯತ್ನ ನಡೆದಿಲ್ಲ, ಕೊಲೆಯ ಬಳಿಕ ಕುರಿಗಳನ್ನು ಮನೆಯವರೇ ಸಾಗಿಸಿರಬಹುದೆಂಬ ಅನುಮಾನ ದಟ್ಟವಾಗಿದೆ.
ಬಳಿಕ ರಾಯಪ್ಪನ ಶರ್ಟ್ ಮೇಲೆ ಚೆಲ್ಲಿದ್ದ ಹಾಗೂ ಅವರ ಮನೆಯಲ್ಲಿನ ಖಾರದ ಪುಡಿಗೂ ಸಾಮ್ಯತೆ ಕಂಡು ಬಂದಿದೆ. ಕುಟುಂಬಸ್ಥರ ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಆ ದಿನ ಮತ್ತೋರ್ವ ಮಗನೊಂದಿಗೆ ತಂದೆ ಸಂತೆಗೆ ತೆರಳಿರುವುದು ಕಂಡು ಬಂದಿದೆ. ಹೀಗಾಗಿ ‘ಅಣ್ಣ ಬಂದಿಲ್ಲ’ ಎಂದು ಕರೆ ಮಾಡಿದ್ದ ಬಸವರಾಜನತ್ತ ಪೊಲೀಸರ ದೃಷ್ಟಿ ನೆಟ್ಟಿದೆ. ಆತನನ್ನು ಕರೆತಂದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ, ಹೊರದೇಶದಲ್ಲಿ ದುಡಿಯುತ್ತಿದ್ದ ತನ್ನನ್ನು ಕರೆಯಿಸಿ ಕುರಿಕಾಯಲು ಹೇಳಿದ್ದರಿಂದ ಹತ್ಯೆಗೈದಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ.
ಅಸಲಿಗೆ ಅಂದು ನಡೆದಿದ್ದೇನು?
ಕುರಿ ಹಿಂಡಿನೊಂದಿಗೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತ ಕುಳಿತಿದ್ದ ಅಣ್ಣ ರಾಯಪ್ಪನ ಕಣ್ಣಿಗೆ ಖಾರದ ಪುಡಿ ಎರಚಿ, ತಲೆ ಮೇಲೆ ಕಲ್ಲುಹಾಕಿ ಬಸವರಾಜ ಹತ್ಯೆಗೈದಿದ್ದ. ಅಲ್ಲದೇ, ತಾನೇ ಕುರಿಗಳನ್ನು ಕಾಲುವೆ ದಾಟಿಸಿ ಮತ್ತೊಂದು ಮಾರ್ಗದಿಂದ ಮನೆ ಸೇರಿದ್ದ. ಬಳಿಕ ಕುರಿಗಳಷ್ಟೇ ಮನೆಗೆ ಬಂದಿವೆ, ಅಣ್ಣನ ಸುಳಿವಿಲ್ಲ ಎಂದು ಮನೆಯಲ್ಲಿಟ್ಟಿದ್ದ ತನ್ನ ಮೊಬೈಲ್‌ನಿಂದ ಮತ್ತೋರ್ವ ಅಣ್ಣನಿಗೆ ಕರೆ ಮಾಡಿ ಹುಡುಕಾಟದ ನಾಟಕವಾಡಿದ್ದ. ಆದರೆ, ಚಾಣಾಕ್ಷತೆಯಿಂದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಜಾವೇದ ಮುಶಾಪುರಿ ಅವರ ನೇತೃತ್ವದ ತಂಡ, ಕೊಲೆಗಾರರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದೆ. ಇಷ್ಟರಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.
