ರಾಯಚೂರು: 15ನೇ ಹಣಕಾಸು ಯೋಜನೆಯಲ್ಲಿ ₹26.71 ಲಕ್ಷ ದುರುಪಯೋಗ ಆರೋಪ, ಇಬ್ಬರು ಪಿಡಿಓ ಅಮಾನತು

ರಾಯಚೂರು: ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಇಬ್ಬರು ಪಿಡಿಓಗಳನ್ನು ಅಮಾನತು ಮಾಡಲಾಗಿದೆ.

ಸರ್ಕಾರಿ ಬೊಗ್ಗಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಪಂ ಪಿಡಿಓ ಗಂಗಮ್ಮ ಹಾಗೂ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂ ಪಿಡಿಓ ಶಿವರಾಜ ಎನ್ನುವವರನ್ನು ರಾಯಚೂರು ಜಿಪಂ ಸಿಇಓ ಪಾಂಡ್ವೇ ರಾಹುಲ್ ತುಕಾರಾಮ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಿಡಿಓಗಳ ವಿರುದ್ಧ 15ನೇ ಹಣಕಾಸು ಯೋಜನೆಯಲ್ಲಿ 26,71,303 ರೂಪಾಯಿ ದುರುಪಯೋಗ ಆರೋಪ ಕೇಳಿಬಂದಿತ್ತು. ಕಾಮಗಾರಿಗಳ ಬಿಲ್ ಹಾಗೂ ಸಾಮಗ್ರಿಗಳ ಖರೀದಿ ಬಿಲ್‌ಗಳಲ್ಲಿ ವ್ಯತ್ಯಾಸ ಮಾಡಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.