ರಾಹುಲ್ ಶಕ್ತಿ: ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಶತಕ ದಾಖಲು; ಟೀಮ್ ಇಂಡಿಯಾಗೆ ಭದ್ರ ಬುನಾದಿ

ಬೆಂಗಳೂರು : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ದಿನ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಂತರ, ಟೀಮ್ ಇಂಡಿಯಾದ ಮಾರಕ ಬೌಲಿಂಗ್ ಮುಂದೆ, ವೆಸ್ಟ್ ಇಂಡೀಸ್ ಕೇವಲ 162 ರನ್‌ಗಳಿಗೆ ಆಲೌಟ್ ಆಗಿತ್ತು. ಇದರ ನಂತರ, ಟೀಮ್ ಇಂಡಿಯಾ ಮೊದಲ ದಿನದ ಆಟದ ಅಂತ್ಯದವರೆಗೆ 2 ವಿಕೆಟ್‌ಗಳನ್ನು ಕಳೆದುಕೊಂಡು 121 ರನ್ ಗಳಿಸಿತ್ತು. ಈಗ ಎರಡನೇ ದಿನದ ಆಟ ನಡೆಯುತ್ತಿದ್ದು, ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ಮೊದಲ ದಿನದಾಟದಲ್ಲಿ ಅರ್ಧಶತಕ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಾಹುಲ್, ಇಂದು ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರಿಗೆ ಗಿಲ್ ಕೂಡ ಉತ್ತಮ ಸಾಥ್ ನೀಡಿದರು. ರಾಹುಲ್ 190 ಎಸೆತಗಳಲ್ಲಿ 12 ಫೋರ್ನೊಂದಿಗೆ ಆಕರ್ಷಕ ಶತಕ ಬಾರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಇವರ 11ನೇ ಸೆಂಚುರಿ ಆಗಿದೆ. 2016ರ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಇವರ ಬ್ಯಾಟ್ನಿಂದ ಬಂದ ಮೊದಲ ಶತಕ ಇದಾಗಿದೆ. ಹಾಗೂ ತವರಿನಲ್ಲಿ ಎರಡನೇ ಶತಕವಾಗಿದೆ.
ಕೆಎಲ್ ರಾಹುಲ್ ಶುಭಮನ್ ಗಿಲ್ ಜೊತೆ 98 ರನ್ ಗಳ ಜೊತೆಯಾಟವಾಡಿದರು, ಮತ್ತು ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿ 68 ರನ್ ಗಳ ಜೊತೆಯಾಟವಾಡಿದರು. ಇಬ್ಬರ ಜೊತೆಯಲ್ಲೂ ಕೆಎಲ್ ರಾಹುಲ್ ಉತ್ತಮವಾಗಿ ಬ್ಯಾಟ್ ಬೀಸಿ ಇನ್ನಿಂಗ್ಸ್ ಕಟ್ಟಿದರು
3211 ದಿನಗಳ ನಂತರ ಭಾರತದಲ್ಲಿ ಶತಕ
ಈ ಶತಕ ಕೆಎಲ್ ರಾಹುಲ್ ಪಾಲಿಗೆ ಬಹಳ ಮಹತ್ವದ್ದಾಗಿದೆ. ಅವರು 3,211 ದಿನಗಳ ನಂತರ ಭಾರತದಲ್ಲಿ ಶತಕ ಗಳಿಸಿದರು. ಈ ಅಂಕಿಅಂಶಗಳು ಆಶ್ಚರ್ಯಕರವಾದರೂ ನಿಜ. ಕೆಎಲ್ ರಾಹುಲ್ ಭಾರತದಲ್ಲಿ ಅನೇಕ ಬಾರಿ ಶತಕ ಗಳಿಸುವ ಸಮೀಪ ಬಂದಿದ್ದರು. ವಿದೇಶಿ ನೆಲದಲ್ಲಿ ಅವರು ಹಲವಾರು ಶತಕಗಳನ್ನು ಗಳಿಸಿದ್ದರೂ, ಈ ಶತಕವು ಭಾರತದಲ್ಲಿ ಬಹಳ ಸಮಯದ ನಂತರ ಬಂದಿದೆ. ಇದು ಅವರು ಭಾರತದಲ್ಲಿ ಗಳಿಸಿದ ಅವರ ವೃತ್ತಿಜೀವನದ ಎರಡನೇ ಶತಕವಾಗಿದೆ.
ಎರಡನೇ ದಿನದಂದು ಅರ್ಧಶತಕ ಗಳಿಸಿದ ನಂತರ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಔಟಾದರು. ಗಿಲ್ 100 ಎಸೆತಗಳಲ್ಲಿ 50 ರನ್ ಗಳಿಸಿದರು. ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಗಿಲ್ ಅವರನ್ನು ಔಟ್ ಮಾಡಿದರು. ಸದ್ಯ ಕ್ರೀಸ್ನಲ್ಲಿ ಶತಕ ಸಿಡಿಸಿರುವ ರಾಹುಲ್ ಜೊತೆಗೆ ಧ್ರುವ್ ಜೂರೆಲ್ ಇದ್ದಾರೆ.