ರಾಹುಲ್ ಗಾಂಧಿ ಆರೋಪಕ್ಕೆ ‘ನೈಜ’ ಮಹಿಳಾ ಮತದಾರರಿಂದ ತಿರುಗೇಟು: ‘ಬ್ರೆಜಿಲ್ ಮಾಡೆಲ್ ಯಾರು ಅಂತ ನಂಗೆ ಗೊತ್ತಿಲ್ಲ, ನನ್ನ ಕಾರ್ಡ್‌ನಲ್ಲಿ ನಂದೇ ಫೋಟೋ ಇದೆ!’

ನವದೆಹಲಿ: ಬ್ರೆಜಿಲ್ ಮಾಡೆಲ್ (Brazil Model) ಮೇಲೆ ಮತಗಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಮಹಿಳಾ ಮತದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮತವನ್ನು ನಾನು ಚಲಾಯಿಸಿದ್ದೇನೆ. ಆ ಬ್ರೆಜಿಲ್ ಮಾಡೆಲ್ ಯಾರೆಂಬುದು ನನಗೆ ಗೊತ್ತಿಲ್ಲ. ನನ್ನ ಬಳಿ ಇರುವ ಕಾರ್ಡ್‌ನಲ್ಲಿ ನನ್ನ ಫೋಟೋ ಇದೆ. ರಾಹುಲ್ ಗಾಂಧಿ ಅವರು ತೋರಿಸಿದ ಕಾರ್ಡ್‌ನಲ್ಲಿ ಇಲ್ಲ. ನಾನು ಮತ ಹಾಕಿದ್ದೇನೆ. (ನಕಲಿ ಕಾರ್ಡ್‌ನಲ್ಲಿ) ಅದರಲ್ಲಿ ಯಾರ ಫೋಟೋ ಎಂದು ನನಗೆ ತಿಳಿದಿಲ್ಲ ಎಂದು ಮುನೇಶ್ ಹೆಸರಿನ ಮಹಿಳೆ ತಿಳಿಸಿದ್ದಾರೆ.
ಸ್ಟಾಕ್ ಇಮೇಜ್ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಲಾದ ಬ್ರೆಜಿಲಿಯನ್ ಮಹಿಳೆಯ ಫೋಟೋದೊಂದಿಗೆ ಒಂದೇ ವೋಟರ್ ಐಡಿಯನ್ನು ಕಳೆದ ವರ್ಷ ಹರಿಯಾಣದ ರಾಯ್‌ನಲ್ಲಿ 22 ಬಾರಿ ಮತ ಚಲಾಯಿಸಲು ಬಳಸಲಾಗಿದೆ ಎಂದು ಬುಧವಾರ ರಾಹುಲ್ ಗಾಂಧಿ ಆರೋಪಿಸಿದ್ದರು. ಬಿಜೆಪಿಯ ಕೃಷ್ಣ ಗಹ್ಲಾವತ್ ಅವರು ಕಾಂಗ್ರೆಸ್‌ನ ಭಗವಾನ್ ಆಂಟಿಲ್ ಅವರನ್ನು 4,673 ಮತಗಳಿಂದ ಸೋಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಕಿರಣ್ ರಿಜಿಜು, ಬಿಹಾರದಲ್ಲಿ ಮತದಾನ ಪ್ರಾರಂಭವಾಗುವ ಗಂಟೆಗಳ ಮೊದಲು ರಾಹುಲ್ ಗಾಂಧಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಹಾರದಲ್ಲಿ ಏನೂ ಉಳಿದಿಲ್ಲ. ಆದ್ದರಿಂದ ಅವರ ಆರೋಪವನ್ನು ಹರಿಯಾಣಕ್ಕೆ ತಿರುಗಿಸಿದ್ದಾರೆಂದು ಬೇಸರ ಹೊರಹಾಕಿದ್ದಾರೆ.
ಹರಿಯಾಣ ಚುನಾವಣಾ ಫಲಿತಾಂಶದ ಪರಿಶೀಲನೆಯ ಸಂದರ್ಭದಲ್ಲಿ ಕಾಂಗ್ರೆಸ್ ಯಾವುದೇ ಸೂಕ್ತ ಮೇಲ್ಮನವಿ ಅಥವಾ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಆಧಾರರಹಿತ ಆರೋಪಗಳನ್ನು ತಳ್ಳಿ ಹಾಕಿದೆ.