ಜರ್ಮನಿಯ ಬಿಎಂಡಬ್ಲ್ಯು ಫ್ಯಾಕ್ಟರಿಯಲ್ಲಿ ರಾಹುಲ್ ಗಾಂಧಿ: ಭಾರತದ ಉತ್ಪಾದನಾ ವಲಯದ ಕುರಿತ ಹೇಳಿಕೆಗೆ ಅಂಕಿ-ಅಂಶಗಳೊಂದಿಗೆ ಬಿಜೆಪಿ ತಿರುಗೇಟು

ನವದೆಹಲಿ : ಜರ್ಮನಿಯ ಮ್ಯೂನಿಕ್ನಲ್ಲಿರುವ ವಿಶ್ವಪ್ರಸಿದ್ಧ ಬಿಎಂಡಬ್ಲ್ಯು (BMW) ಕಾರ್ಖಾನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಭಾರತದಲ್ಲಿ ಉತ್ಪಾದನಾ ವಲಯವು ಇಳಿಮುಖವಾಗುತ್ತಿದೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಾರ್ಖಾನೆಯ ಕಾರ್ಯವೈಖರಿಯನ್ನು ಅವಲೋಕಿಸಿದ ರಾಹುಲ್ ಗಾಂಧಿ, ಅಲ್ಲಿ ಭಾರತದ ಟಿವಿಎಸ್ ಹಾಗೂ ಬಿಎಂಡಬ್ಲ್ಯು ಜಂಟಿಯಾಗಿ ಬೈಕ್ ಅಭಿವೃದ್ಧಿಪಡಿಸುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರಾದರೂ, ಒಟ್ಟಾರೆಯಾಗಿ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ ಕುಸಿಯುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದರು.


ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಹುಲ್ ಗಾಂಧಿ ಅವರ ವಾದವನ್ನು ದತ್ತಾಂಶಗಳ ಸಮೇತ ಅಲ್ಲಗಳೆದಿದ್ದಾರೆ; 2014ರಿಂದ ಈಚೆಗೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 1.9 ಲಕ್ಷ ಕೋಟಿ ರೂ.ನಿಂದ 11.3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಹಾಗೂ ಕೇವಲ 2ರಷ್ಟಿದ್ದ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳ ಸಂಖ್ಯೆ ಈಗ 300ಕ್ಕೆ ಜಿಗಿದಿದೆ ಎಂಬ ಅಂಕಿ-ಅಂಶಗಳನ್ನು ಅವರು ಹಂಚಿಕೊಂಡಿದ್ದಾರೆ. ಭಾರತದ ರಫ್ತು ಮತ್ತು ಉತ್ಪಾದನಾ ವಲಯದಲ್ಲಿ ಈ ಪ್ರಮಾಣದ ಭಾರಿ ಪ್ರಗತಿ ಕಂಡುಬಂದಿದ್ದರೂ ರಾಹುಲ್ ಗಾಂಧಿ ಅವರು ವಿದೇಶಿ ಮಣ್ಣಿನಲ್ಲಿ ದೇಶದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

