ರಾಹುಲ್ ಗಾಂಧಿ ಹಿತಾಸಕ್ತಿ ವಿರುದ್ಧ ವಿದೇಶದಲ್ಲಿ ಮಾತು: “ಇಂದಿರಾ ಗಾಂಧಿಯೂ ಈ ರೀತಿ ಮಾಡಿರಲಿಲ್ಲ” ಎಂದ ಕಿರಣ್ ರಿಜಿಜು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇತ್ತೀಚಿನ ವಿದೇಶ ಪ್ರವಾಸ ಮತ್ತು ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿವೆ. ಕೊಲಂಬಿಯಾ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತೀಯ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಆಡಳಿತ ಪಕ್ಷದ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಷಯದ ಕುರಿತು ಐಎಎನ್‌ಎಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಕೇಂದ್ರ ಸಚಿವ ಕಿರಣ್ ರಿಜಿಜು ರಾಹುಲ್ ಗಾಂಧಿ ಅವರ ಹೇಳಿಕೆಗಳು, ಜೆನ್ ಝಿ ದಂಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧದ ವಿರೋಧ, ಸೇನೆಯ ಮೇಲಿನ ಕಾಮೆಂಟ್‌ಗಳು ಮತ್ತು ಸಾಮಾಜಿಕ ಸಾಮರಸ್ಯದಂತಹ ವಿಷಯಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ವಿಷಯ ಕಾರುವ ಮೊದಲ ಸಂಸದ ರಾಹುಲ್ ಗಾಂಧಿ(Rahul Gandhi) ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಭಾರತದ ಹಿತಾಸಕ್ತಿ ವಿರುದ್ಧ ವಿದೇಶದಲ್ಲಿ ಮಾತನಾಡಿರುವುದು ತಪ್ಪು ಎಂದು ರಿಜಿಜು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ವೈಯಕ್ತಿಕ ಭೇಟಿ ಬಗ್ಗೆ ನಾನೇನು ಮಾತನಾಡುತ್ತಿಲ್ಲ, ಆದರೆ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಭಾರತದ ಹಿತಾಸಕ್ತಿ ವಿರುದ್ಧ ಹೇಳಿಕೆಗಳು ಚಿಂತಾಜನಕ ಎಂದರು.
ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತ ಬಳಿಕ ವಿದೇಶ ಪ್ರವಾಸಕ್ಕೆ ಹೋದಾಗ, ಭಾರತದಲ್ಲಿ ಅವರ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಅವರನ್ನು ಕೇಳಲಾಯಿತು. ಅವರು ವಿದೇಶದಲ್ಲಿ ಭಾರತ ಸರ್ಕಾರದ ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದರು. ಆದರೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶದ ವಿರುದ್ಧ ಮಾತನಾಡಿ ವಿಷ ಕಾರಿದ ಮೊದಲ ವಿರೋಧ ಪಕ್ಷದ ನಾಯಕ ಮತ್ತು ಸಂಸದ. ಇದು ಅತ್ಯಂತ ದುಃಖಕರ ಸಂಗತಿ ಎಂದರು.
ಗುರುವಾರ ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡಿ, ಭಾರತ ಎಂಜಿನಿಯರಿಂಗ್ ಹಾಗೂ ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಬಲವಾದ ಸಾಮರ್ಥ್ಯ ಹೊಂದಿದೆ. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ದೊಡ್ಡ ಸವಾಲು ಎಂದು ಹೇಳಿಕೆ ನೀಡಿದ್ದರು.
ಜೆನ್ ಝಿ ಬಗ್ಗೆ ಮಾತನಾಡಿದ ರಿಜಿಜು, ಭಾರತದ Gen-Z ಸಂವೇದನಾಶೀಲರು, ಪ್ರಾಮಾಣಿಕರು, ತೀಕ್ಷ್ಣರು, ಬುದ್ಧಿವಂತರು ಮತ್ತು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ತಮ್ಮ ಧ್ಯೇಯದಲ್ಲಿ ದೃಢನಿಶ್ಚಯ ಹೊಂದಿದ್ದಾರೆ.ಭಾರತವನ್ನು 6 ದಶಕಗಳ ಕಾಲ ಬಡತನದಲ್ಲಿಟ್ಟ ಪಕ್ಷ ಮತ್ತು ಕುಟುಂಬವನ್ನು ಜೆನ್ ಝಿ ಸಹಿಸುವುದಿಲ್ಲ ಎಂದು ಹೇಳಿದರು.ಒಂದು ಕುಟುಂಬವನ್ನು ಮಾತ್ರ ಕಾಳಜಿ ವಹಿಸುವ ಭ್ರಷ್ಟ ಮತ್ತು ಅದಕ್ಷ ರಾಜಕಾರಣಿಗಳನ್ನು ಅವರು ತಿರಸ್ಕರಿಸುತ್ತಾರೆ.
ಕಳೆದ ತಿಂಗಳು ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಹೇಳಿದ ಬಳಿಕ. ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಯುವಕರೇ ರಾಷ್ಟ್ರದ ವಿದ್ಯಾರ್ಥಿಗಳು ರಾಷ್ಟ್ರದ ಜೆನ್ ಝಿಗಳು ಸಂವಿಧಾನವನ್ನು ರಕ್ಷಿಸುತ್ತಾರೆ, ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಮತ್ತು ಮತ ಕಳ್ಳತನವನ್ನು ತಡೆಯುತ್ತಾರೆ.
ನಾನು ಯಾವಾಗಲೂ ಅವರೊಂದಿಗೆ ನಿಲ್ಲುತ್ತೇನೆ ಎಂದು ಬರೆದಿದ್ದರು. ಜೆನ್ ಝಿ ಕುಟುಂಬ ಆಡಳಿತವನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ನಂತರ ರಾಹುಲ್ ಅವರನ್ನು ಏಕೆ ಸಹಿಸಿಕೊಳ್ಳುತ್ತಾರೆ. ಒಂದು ದಿನ ನಿಮ್ಮನ್ನೂ ಇಲ್ಲಿಂದ ಓಡಿಸದೇ ಬಿಡುವುದಿಲ್ಲ ಎಂದು ರಿಜಿಜು ಹೇಳಿದ್ದಾರೆ.