ತೈವಾನ್‌ನಲ್ಲಿ ರಗಾಸಾ ಸೂಪರ್ ಚಂಡಮಾರುತ ಅಬ್ಬರ: 14 ಸಾವು, 124 ಮಂದಿ ನಾಪತ್ತೆ

ತೈಪೆ: ತೈವಾನ್‌ನಲ್ಲಿ ಸಂಭವಿಸಿದ ರಗಾಸಾ (Super Typhoon Ragasa) ಚಂಡಮಾರುತಕ್ಕೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 124 ಮಂದಿ ಕಾಣೆಯಾಗಿದ್ದಾರೆ. ದುರಂತದಲ್ಲಿ 18 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಸೃಷ್ಟಿಸಿದೆ.

ಚಂಡಮಾರುತದ ಪರಿಣಾಮ ದಕ್ಷಿಣ ತೈವಾನ್‌ನಲ್ಲಿ (South Taiwan) ಭಾರೀ ಮಳೆ ಸುರಿಯುತ್ತಿದ್ದು, ಕಡಲತೀರದಲ್ಲಿ ಪ್ರವಾಹದಿಂದಾಗಿ ನೂರಾರು ಮರಗಳು ಧರೆಗುರುಳಿವೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ರಾಗಸ’ ಚಂಡಮಾರುತ ಮಂಗಳವಾರ ದಕ್ಷಿಣ ಚೀನಾಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದೆ. ಚಂಡಮಾರುತ ಬುಧವಾರ ಹಾಂಗ್ ಕಾಂಗ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಿವಿಧೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಚೀನಾದ ದಕ್ಷಿಣ ಭಾಗದ ಕನಿಷ್ಠ 10 ನಗರಗಳಲ್ಲಿ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.
ಭೂಕುಸಿತಕ್ಕೆ ನಲುಗಿದ ಜನ
ತೈವಾನ್ ಪೂರ್ವ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಭೂಕುಸಿತ ಉಂಟಾಗಿದೆ. ಮಂಗಳವಾರ 2 ಇದ್ದ ಸಾವಿನ ಸಂಖ್ಯೆ ಬುಧವಾರ 14ಕ್ಕೆ ಏರಿಕೆಯಾಗಿದೆ. ಈವರೆಗೆ 124 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸುತ್ತಿವೆ.
