ರಚಿನ್ ರವೀಂದ್ರ ಭರ್ಜರಿ ಶತಕ: ಝಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಬೃಹತ್ ಮುನ್ನಡೆ

ಬುಲವಾಯೊದ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಯುವ ಎಡಗೈ ದಾಂಡಿಗ ರಚಿನ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡ ಪ್ರಥಮ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪ್ರಥಮ ಇನಿಂಗ್ಸ್ ನಲ್ಲಿ 125 ರನ್ ಗಳಿಸಿ ಆಲೌಟ್ ಆಗಿತ್ತು.
ಝಿಂಬಾಬ್ವೆ ತಂಡದ ಮೊದಲ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ನ್ಯೂಝಿಲೆಂಡ್ ಪರ ಆರಂಭಿಕ ದಾಂಡಿಗ ಡೆವೊನ್ ಕಾನ್ವೆ (154) ಭರ್ಜರಿ ಶತಕ ಸಿಡಿಸಿದರು. ಇನ್ನು ಮತ್ತೋರ್ವ ಆರಂಭಿಕ ವಿಲ್ ಯಂಗ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 74 ರನ್ಗಳ ಕೊಡುಗೆ ನೀಡಿದರು.
ಆ ಬಳಿಕ ಬಂದ ಹೆನ್ರಿ ನಿಕೋಲ್ಸ್ ಹಾಗೂ ರಚಿನ್ ರವೀಂದ್ರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 4ನೇ ವಿಕೆಟ್ ಗೆ ದ್ವಿಶತಕದ ಜೊತೆಯಾಟ ಮೂಡಿಬಂತು. ಎಡಗೈ ದಾಂಡಿಗರ ಈ ಜುಗಲ್ಬಂಧಿಯ ಕಾರಣ ನ್ಯೂಝಿಲೆಂಡ್ ತಂಡದ ಮೊತ್ತ 500ರ ಗಡಿದಾಟಿತು.
ಇದರ ನಡುವೆ ಹೆನ್ರಿ ನಿಕೋಲ್ಸ್ 245 ಎಸೆತಗಳಲ್ಲಿ 15 ಫೋರ್ ಗಳೊಂದಿಗೆ 150 ರನ್ ಗಳಿಸಿದರು. ಅತ್ತ ಎಚ್ಚರಿಕೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ರಚಿನ್ ರವೀಂದ್ರ ದಿಢೀರನೆ ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಿದರು.
ಪರಿಣಾಮ ರಚಿನ್ ರವೀಂದ್ರ ಅವರ ಬ್ಯಾಟ್ ನಿಂದ 104 ಎಸೆತಗಳಲ್ಲಿ ಶತಕ ಮೂಡಿಬಂತು. ಕುತೂಹಲಕಾರಿ ವಿಷಯ ಎಂದರೆ 104 ಎಸೆತಗಳಲ್ಲಿ ರಚಿನ್ ಬರೋಬ್ಬರಿ 56 ಎಸೆತಗಳನ್ನು ಡಾಟ್ ಮಾಡಿದ್ದರು. ಅಂದ 56 ಎಸೆತಗಳಲ್ಲಿ ಯಾವುದೇ ರನ್ ಗಳಿಸಿರಲಿಲ್ಲ.
ಇದಾಗ್ಯೂ ಉಳಿದ 48 ಎಸೆತಗಳಲ್ಲಿ 13 ಫೋರ್ ಗಳೊಂದಿಗೆ 100 ರನ್ ಚಚ್ಚಿದ್ದರು. ಇನ್ನು ಶತಕದ ಬಳಿಕ ಕೂಡ ಆರ್ಭಟ ಮುಂದುವರೆಸಿದ ರಚಿನ್ ಅಂತಿಮವಾಗಿ 139 ಎಸೆತಗಳಲ್ಲಿ 21 ಫೋರ್ ಹಾಗೂ 2 ಸಿಕ್ಸ್ ನೊಂದಿಗೆ ಅಜೇಯ 165 ರನ್ ಬಾರಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ ನಲ್ಲಿ 3 ಕಳೆದುಕೊಂಡು 601 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.
