ಪುತ್ತೂರಿನ ವಿಟ್ಲದಲ್ಲಿ ಭಾರೀ ಸ್ಫೋಟ: 12 ಮನೆಗಳಿಗೆ ಹಾನಿ, 5 ಗ್ರಾಮಗಳಲ್ಲಿ ಭೂಕಂಪನ ಅನುಭವ

ಪುತ್ತೂರಿನ ವಿಟ್ಲದಲ್ಲಿ ಭಾರೀ ಸ್ಫೋಟ ಸಂಭವಿಸಿ 12 ಮನೆಗಳಿಗೆ ಹಾನಿಯಾಗಿದೆ. 5 ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಸ್ಫೋಟದ ಮೂಲ ಕಲ್ಲಿನ ಕೋರೆಯಲ್ಲಿ 100 ಜಿಲೆಟಿನ್ ಕಡ್ಡಿಗಳ ಸಂಗ್ರಹ ಎಂದು ತಿಳಿದುಬಂದಿದೆ.
ಪುತ್ತೂರು: ಪುತ್ತೂರಿನ ವಿಟ್ಲದಲ್ಲಿ ಇದೀಗ ಭಾರೀ ಸ್ಫೋಟವೊಂದು ಸಂಭವಿಸಿದೆ. ಏಕಾಏಕಿ ಸಂಭವಿಸಿದ ಈ ಸ್ಫೋಟದಿಂದಾಗಿ ಬರೋಬ್ಬರಿ 12 ಮನೆಗಳಿಗೆ ಭಾರೀ ಹಾನಿ ಸಂಭವಿಸಿದೆ ಎನ್ನಲಾಗಿದೆ. ಅಲ್ಲದೇ ಮನೆಯ ಗೋಡೆಗಳಲ್ಲಿ ಭಾರೀ ಬಿರುಕು ಬಿದ್ದಿದ್ದು, ಸ್ಫೋಟದ ಸದ್ದಿಗೆ ಮನೆಯ ಸಿಮೆಂಟ್ ಶೀಟ್ ಗಳು ಪೀಸ್ ಪೀಸ್ ಆಗಿ ಹೋಗಿದೆ ಎನ್ನಲಾಗಿದೆ.
ಸ್ಫೋಟಗೊಂಡ ರಭಸಕ್ಕೆ ನಲುಗಿದ 5 ಗ್ರಾಮ!
ಇದೀಗ ವಿಟ್ಲದ ಮಾಡತ್ತಡ್ಕದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ 5 ಗ್ರಾಮದಲ್ಲಿ ಭೂಕಂಪನದ ಅನುಭವವಾಗಿದೆ. ಇನ್ನು ಮಧ್ಯಾಹ್ನ ವೇಳೆಗೆ ಈ ಘಟನೆ ನಡೆದಿದ್ದು, ಸ್ಫೋಟ ಸಂಭವಿಸುತ್ತಿದ್ದಂತೆಯೇ ಗ್ರಾಮಸ್ಥರು ಭಯದಿಂದಲೇ ಮನೆಯಿಂದ ಓಡಿ ಬಂದಿದ್ದಾರೆ. ವಿಟ್ಲದ ಮುಡ್ನೂರು, ವಿಟ್ಲ ಪಟ್ಟಣ ಪಂಚಾಯತ್, ಕುಳ ಗ್ರಾಮ, ಕೇಪು ಗ್ರಾಮ, ಪುಣಚ ಗ್ರಾಮದಲ್ಲಿ ಸ್ಫೋಟದ ಸದ್ದು ಕೇಳಿಸಿದೆ ಎನ್ನಲಾಗಿದೆ.