ಪುತ್ತೂರಿನ ಸಿಎಂ ಕಾರ್ಯಕ್ರಮದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಜನ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮಂಗಳೂರು:ದೀಪಾವಳಿ ಹಬ್ಬದಂದೆ ಕಹಿ ಘಟನೆ ನಡೆದಿದೆ . ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 11 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.

ಕುಡಿಯಲು ನೀರು ಸಿಗದೆ ಜನ ಪರದಾಡಿದ್ದು, ಮಹಿಳೆಯರು, ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಲೆಕ್ಕಕ್ಕಿಂತ ಹೆಚ್ಚು ಮಂದಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು.
ಅಶೋಕ್ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಆಚರಣೆ ಹಾಗೂ, ವಸ್ತ್ರ ಮತ್ತು ತಟ್ಟೆ-ಬಟ್ಟಲಿನ ವಿತರಣೆ ಕಾರ್ಯಕ್ರಮ ಇಡಲಾಗಿತ್ತು. ಇದನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಕ್ರೀಡಾಂಗಣದಲ್ಲಿ 20 ಸಾವಿರ ಜನ ಸೇರುವ ಸಾಮರ್ಥ್ಯ ಇದೆ. ಆದರೆ ಇದಕ್ಕಿಂತ ಹೆಚ್ಚು ಜನ ಸೇರಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗಿ ಉಸಿರಾಟದ ಸಮಸ್ಯೆ ಉಂಟಾಯಿತು. ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಊಟದ ಹೊತ್ತು ಮೀರಿದ್ದರಿಂದ ತಲೆತಿರುಗಿ ಬಿದ್ದಿದ್ದಾರೆ. 1 ಲಕ್ಷ ಜನ ಸೇರುವ ನಿರೀಕ್ಷೆ ಎಂದು ಆಯೋಜಕರು ಹೇಳಿದ್ದರು. ಇದಕ್ಕೆ ಪೊಲೀಸ್ ಇಲಾಖೆಯಿಂದ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಮುನ್ನೆಚ್ಚರಿಕೆ ವಹಿಸದೇ ಇರುವ ಹಿನ್ನೆಲೆ ಅವಘಡ ಆಗಿದೆ. ಸಿಎಂ ಕಾರ್ಯಕ್ರಮ ಉದ್ಘಾಟಿಸಿ ತೆರಳಿದ ಕೆಲವೇ ಹೊತ್ತಲ್ಲಿ ಈ ಘಟನೆ ನಡೆದಿದೆ.