‘ಶುದ್ಧ ಪ್ರೀತಿ’: ಶಿಕ್ಷಕಿಗೆ ವಿಶೇಷವಾಗಿ ಸಿಹಿ ಉಡುಗೊರೆ ನೀಡಿದ ಪುಟಾಣಿ; ವಿಡಿಯೋ ವೈರಲ್

ಮಕ್ಕಳೆಂದರೆ ಹಾಗೆ, ಯಾರು ತಮ್ಮನ್ನು ಅತಿಯಾಗಿ ಕಾಳಜಿ ವಹಿಸ್ತಾರೋ, ಪ್ರೀತಿಸ್ತಾರೋ ಅವರ ಜೊತೆಗೆ ಆತ್ಮೀಯವಾಗಿ ವರ್ತಿಸುತ್ತದೆ. ಪುಟ್ಟ ಮಕ್ಕಳಿಗೆ ಶಿಕ್ಷಕರು ಎಂದರೆ ಅದೇನೋ ಪ್ರೀತಿ, ಹೀಗಾಗಿ ಏನೇ ಇದ್ರೂ ತನ್ನ ಶಿಕ್ಷಕರ ಜೊತೆಗೆ ಹೇಳಿಕೊಳ್ಳುವುದನ್ನು ನೋಡಬಹುದು. ಕಳೆದ ಶಿಕ್ಷಕರ ದಿನಾಚರಣೆಯಂದು ಪುಟ್ಟ ಹುಡುಗಿಯೊಬ್ಬಳು ಸಿಹಿ ಉಡುಗೊರೆ ನೀಡಿ ಶಿಕ್ಷಕಿಗೆ ವಿಶೇಷವಾಗಿ ಶುಭ ಹಾರೈಸಿದ್ದಳು. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಹೃದಯಕ್ಕೆ ಹತ್ತಿರವಾಗಿರುವ ಈ ದೃಶ್ಯ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

divyadj ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಕಳೆದ ಶಿಕ್ಷಕರ ದಿನಾಚರಣೆಯಂದು ಪುಟ್ಟ ಹುಡುಗಿಯೂ ಶಿಕ್ಷಕಿಯ ಬಳಿ ಬಂದು ಶುಭ ಹಾರೈಸಿದ್ದು, ತನ್ನ ಕೈಯಾರೆ ಮಾಡಿದ ಉಡುಗೊರೆಯನ್ನು ಶಿಕ್ಷಕಿಗೆ ನೀಡಿರುವುದನ್ನು ನೀವು ನೋಡಬಹುದು. ಕವರ್‌ನಿಂದ ಪೆನ್ ಸುತ್ತಲಾಗಿದೆ. ಈ ಕವರ್ ಒಳಗೆ ಪೆನ್ನು ಹಾಗೂ ಹಜ್ಮೋಲಾ ಇರುವುದನ್ನು ಕಂಡು ಶಿಕ್ಷಕಿಯ ತುಟಿಯಲ್ಲಿ ನಗು ಮೂಡಿದೆ.
ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಯಾವುದೇ ಫಿಲ್ಟರ್ ಇಲ್ಲದ ಶುದ್ಧ ಪ್ರೀತಿ ಎಂದಿದ್ದಾರೆ. ಇನ್ನೊಬ್ಬರು, ಇದು ಶುದ್ಧ, ನಿಷ್ಕಲ್ಮಶ ಪ್ರೀತಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಪುಟಾಣಿ ಅಪ್ಪುಗೆ ಅರ್ಹಳು ಎಂದು ಹೇಳಿದ್ದು, ಕೆಲವರು ಹಾರ್ಟ್ ಸಿಂಬಲ್ ಕಳಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
