ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ‘ಶಾಕ್ ಟ್ರೀಟ್ಮೆಂಟ್’; ಕಸ ಎಸೆದ ಯುವತಿಗೆ ಸಾರ್ವಜನಿಕರಿಂದ ಕ್ಲಾಸ್!

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಕಸ ಎಸೆಯುವವರಿಗೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಅಂತಹವರ ಮನೆ ಮುಂದೆಯೇ ಲೋಡ್ಗಟ್ಟಲೆ ತ್ಯಾಜ್ಯವನ್ನು ಮರಳಿ ಸುರಿದು, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ಸಾರ್ವಜನಿಕವಾಗಿ ನಾಚಿಕೆ’ (Public Shaming) ಉಂಟು ಮಾಡುವ ವಿನೂತನ ಪ್ರಯೋಗಕ್ಕೆ ಕೈಹಾಕಿದೆ.


ಪ್ರಾಧಿಕಾರದ ಈ ಕಠಿಣ ಕ್ರಮಗಳ ಹೊರತಾಗಿಯೂ ಹಲವರು ನಗರದ ಸೌಂದರ್ಯವನ್ನು ಕೆಡಿಸುತ್ತಲೇ ಇದ್ದಾರೆ. ಈ ನಡುವೆ, ಜನವಸತಿ ಪ್ರದೇಶದಲ್ಲಿ ಅಜಾಗರೂಕತೆಯಿಂದ ಕಸ ಎಸೆದು ಹೋಗುತ್ತಿದ್ದ ಯುವತಿಯೊಬ್ಬಳನ್ನು ಸ್ಥಳೀಯ ನಿವಾಸಿಗಳು ರೆಡ್ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸಾರ್ವಜನಿಕ ಸ್ಥಳಗಳನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತಿದ್ದ ಯುವತಿಗೆ ಸ್ಥಳೀಯರು ಪ್ರಶ್ನೆಗಳ ಸುರಿಮಳೆಗೈದು, ಆಕೆಯಿಂದಲೇ ಕಸವನ್ನು ಮರಳಿ ಎತ್ತಿಸುವ ಮೂಲಕ ಸಾರ್ವಜನಿಕ ಜವಾಬ್ದಾರಿಯನ್ನು ನೆನಪಿಸಿದ್ದಾರೆ. “ಪ್ರಾಧಿಕಾರ ಎಷ್ಟೇ ಕ್ರಮ ಕೈಗೊಂಡರೂ ಜನರ ಮನಸ್ಥಿತಿ ಬದಲಾಗದಿದ್ದರೆ ನಗರವನ್ನು ಸ್ವಚ್ಛವಾಗಿಡುವುದು ಅಸಾಧ್ಯ” ಎಂಬ ಆಕ್ರೋಶದ ಮಾತುಗಳು ಸ್ಥಳೀಯರಿಂದ ಕೇಳಿಬಂದಿವೆ. ಒಟ್ಟಿನಲ್ಲಿ, ಬೆಂಗಳೂರಿನ ಸ್ವಚ್ಛತೆ ಕಾಪಾಡಲು ಈಗ ಪ್ರಾಧಿಕಾರದ ಜೊತೆಗೆ ಸ್ಥಳೀಯ ನಾಗರಿಕರು ಕೂಡಾ ಕಣಕ್ಕಿಳಿದಿರುವುದು ಕಂಡುಬರುತ್ತಿದೆ.
