ಟೆಕ್ಕಿ ಶರ್ಮಿಳಾ ಕೊ*ಲೆಗೈದ ಪಿಯು ವಿದ್ಯಾರ್ಥಿ ಬಂಧನ

ಮಂಗಳೂರು:ಬೆಂಗಳೂರಿನಲ್ಲಿ ವಾಸವಿದ್ದ ಮಂಗಳೂರು ಕಾವೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶರ್ಮಿಳಾ (35) ಅವರ ನಿಗೂಢ ಸಾವಿನ ಹಿಂದಿದ್ದ ಭಯಾನಕ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಇದೊಂದು ಅತ್ಯಾಚಾರ ಯತ್ನ ಮತ್ತು ಕೊಲೆ ಎಂಬುದು ಸಾಬೀತಾಗಿದೆ. ಕಳೆದ ವಾರ ಶರ್ಮಿಳಾ ಅವರ ಫ್ಲಾಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತಾದರೂ, ಅವರ ಸ್ನೇಹಿತರು ವ್ಯಕ್ತಪಡಿಸಿದ ಅನುಮಾನದಿಂದಾಗಿ ತನಿಖೆ ನಡೆಸಿದ ಪೊಲೀಸರಿಗೆ ನೆರೆಮನೆಯಲ್ಲಿದ್ದ ಕೇರಳ ಮೂಲದ 18 ವರ್ಷದ ಪಿಯುಸಿ ವಿದ್ಯಾರ್ಥಿ ಕರ್ಣಲ್ ಕುರೈ ಎಂಬಾತನ ಕೃತ್ಯ ಬಯಲಾಗಿದೆ.


ಘಟನೆಯ ರಾತ್ರಿ ಕಿಟಕಿಯ ಮೂಲಕ ಶರ್ಮಿಳಾ ಅವರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿದ್ದ ಆರೋಪಿ, ಅವರನ್ನು ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿದ್ದಾನೆ. ಇದಕ್ಕೆ ಶರ್ಮಿಳಾ ಅವರು ಬಲವಾಗಿ ವಿರೋಧ ವ್ಯಕ್ತಪಡಿಸಿದಾಗ ಆಕ್ರೋಶಗೊಂಡ ಯುವಕ, ಆಕೆಯ ಬಾಯಿ ಮತ್ತು ಮೂಗನ್ನು ಬಲವಾಗಿ ಅದುಮಿ ಹಿಡಿದು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ತನ್ನ ಮೇಲಿನ ಸಂಶಯವನ್ನು ಹೋಗಲಾಡಿಸಲು ಮತ್ತು ಕೊಲೆಗೆ ಅಪಘಾತದ ರೂಪ ನೀಡಲು ಇಡೀ ಫ್ಲಾಟ್‌ಗೆ ಬೆಂಕಿ ಹಚ್ಚಿ, ಸಾಕ್ಷ್ಯವಾಗಿ ಉಳಿಯಬಲ್ಲ ಆಕೆಯ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದನು. ಪ್ರಸ್ತುತ ರಾಮಮೂರ್ತಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.