ಪ್ರೇಯಸಿ ಮೇಲೆ ಸೈಕೋ ಕಣ್ಗಾವಲು: ವಿವಾಹಿತ ಮಹಿಳೆಯ ಮನೆ ಹಿಂದೆಯೇ CCTV ಅಳವಡಿಸಿದ ಮಾಜಿ ಗೆಳೆಯ!

ಅಹಮದಾಬಾದ್: ಪ್ರೀತಿಯಲ್ಲಿ ಬಿದ್ದ ಮನುಷ್ಯರು ಎಷ್ಟು ಹುಚ್ಚರಾಗುತ್ತಾರೆ. ಸೈಕೋ ರೀತಿ ವರ್ತಿಸುತ್ತಾರೆ ಎಂಬುದಕ್ಕೆ ಇದೊಂದು ಘಟನೆ ನಿದರ್ಶನವಾಗಿದೆ. ಗುಜರಾತ್‌ನಲ್ಲಿ ಯುವಕನೋರ್ವ ತನ್ನ ವಿವಾಹಿತ ಪ್ರಿಯತಮೆಯ ಚಲನವಲನಗಳ ಮೇಲೆ ಕಣ್ಣಿಡುವುದಕ್ಕೆ ಆಕೆಯ ಮನೆ ಹಿಂದೆಯೇ ಸಿಸಿಟಿವಿ ಅಳವಡಿಸಿದಂತಹ ವಿಚಿತ್ರ ಘಟನೆ ನಡೆದಿದೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಯ ಮನೆ ಹಿಂದೆಯೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಆಕೆಯನ್ನು 24×7 ರಹಸ್ಯವಾಗಿ ಚಿತ್ರೀಕರಿಸಿದ್ದಾನೆ. ಇದು ನಂತರ ಆಕೆ ಹಾಗೂ ಆಕೆಯ ಪತಿ ಗಮನಕ್ಕೆ ಬಂದಿದ್ದು, ಆಕೆಗೆ ಕಿರುಕುಳ ನೀಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹದ ನಂತರವೂ ಮುಂದುವರೆದಿದ್ದ ಒಡನಾಟ: ಕಳ್ಳಾಟಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದ ಮಹಿಳೆ ಪತಿ
ಮೆಹ್ಸಾನಾ ಪೊಲೀಸರ ಹಿರಿಯ ಅಧಿಕಾರಿಗಳ ಪ್ರಕಾರ, ಕಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಅಂಗನವಾಡಿ ಉದ್ಯೋಗಿಯಾಗಿ ದೂರುದಾರ ಮಹಿಳೆ ಕೆಲಸ ಮಾಡುತ್ತಿದ್ದಳು. ಈಕೆಗೆ ಆರೋಪಿಯ ಜೊತೆ ಸುಮಾರು 10 ವರ್ಷಗಳ ಕಾಲ ಸಂಬಂಧವಿತ್ತು. ಮದುವೆಯ ನಂತರವೂ ಆ ಸಂಬಂಧ ಮುಂದುವರೆದಿತ್ತು. ಆದರೆ ಈ ವಿಚಾರ ಆಕೆಯ ಪತಿಗೆ ತಿಳಿದ ನಂತರ ಅವರ ನಡುವಿನ ಬಾಂಧವ್ಯ ಕೊನೆಗೊಂಡಿತ್ತು. ಮಹಿಳೆ ಮತ್ತು ಆಕೆಯ ಪತಿ ಆ ವ್ಯಕ್ತಿಯನ್ನು ಭೇಟಿಯಾಗಿ ಈ ಸಂಬಂಧವನ್ನು ಇಲ್ಲಿಗೆ ಕೊನೆಗೊಳಿಸುವಂತೆ ಕೇಳಿಕೊಂಡರು. ಇದಾದ ನಂತರ ಮಹಿಳೆ ಆತನನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದಳು.
ಹೋದಲೆಲ್ಲಾ ಹಿಂಬಾಲಿಸಿ ಕಿರುಕುಳ: ಹಿತ್ತಲು ಸ್ವಚ್ಛ ಮಾಡುತ್ತಿದ್ದಾಗ ಕಂಡ ಸಿಸಿಟಿವಿ
ಆದರೆ ಆರೋಪಿ ಮಾತ್ರ ಆಕೆಗೆ ಕಿರುಕುಳ ನೀಡುತ್ತಲೇ ಇದ್ದ, ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡುತ್ತಿದ್ದ, ಆಕೆಯ ಮನೆಯ ಬಳಿ ಓಡಾಡುತ್ತಿದ್ದ ಹೀಗೆ ಆಕೆ ಹೋದಲೆಲ್ಲಾ ಹಿಂಬಾಲಿಸುತ್ತಾ ಆಕೆಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ. ಹೀಗಿರುವಾಗ ಒಂದು ದಿನ, ತಮ್ಮ ಮನೆಯ ಹಿಂದಿನ ಪ್ರದೇಶವನ್ನು ಸ್ವಚ್ಛಗೊಳಿಸುತ್ತಿದ್ದಾಗ, ಮಹಿಳೆ ಹಾಗೂ ಆಕೆಯ ಪತಿಗೆ ಪೊದೆಯೊಳಗೆ ಅಡಗಿರುವ ಸಣ್ಣ ಸಿಸಿಟಿವಿ ಕ್ಯಾಮೆರಾ ಕಂಡಿತ್ತು ಎಂದು ಬಾವ್ಲು ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಆರ್. ಚೌಧರಿ ತಿಳಿಸಿದ್ದಾರೆ.
ಮನೆ ಹಿಂದೆ ಸಿಸಿ ಕ್ಯಾಮರಾ ಇರುವುದನ್ನು ಗಮನಿಸಿ ಅನುಮಾನಗೊಂಡ ಆಕೆಯ ಪತಿ ಸಾಧನದ ಮೆಮೊರಿ ಕಾರ್ಡ್ ಪರಿಶೀಲಿಸಿದ್ದಾಗ ಅದರ ದೃಶ್ಯಾವಳಿಯಲ್ಲಿ ಆರೋಪಿ ಕ್ಯಾಮೆರಾ ಮುಂದೆ ನಿಂತಿರುವುದು ಕಂಡು ಬಂದಿದೆ. ಹೀಗಾಗಿ ಇದು ಆತನೇ ಅಳವಡಿಸಿದ್ದು, ತನ್ನ ಪ್ರಿಯತಮೆಯ ದೈನಂದಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಅವನೇ ಫಿಕ್ಸ್ ಮಾಡಿದ್ದು ಎಂಬುದು ದಂಪತಿಗೆ ಖಚಿತವಾಗಿದೆ.
ನಂತರ ಪತಿ ಬಾವ್ಲು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆ ಮಾಡಿದಾಗ ಆರೋಪಿಯೂ ಮಹಿಳೆಯ ಚಲನವಲನಗಳ ಮೇಲೆ ನಿಗಾ ಇಡಲು ಆ ಪ್ರದೇಶದಲ್ಲಿನ ಮತ್ತೊಂದು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪಡೆದುಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ನಾವು ಕಿರುಕುಳ ಪ್ರಕರಣವನ್ನು ವರದಿ ಮಾಡಿದ್ದೇವೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಚೌಧರಿ ಹೇಳಿದರು.
ಇಂತಹ ಕೃತ್ಯಗಳು ವ್ಯಕ್ತಿಯ ಗೌಪ್ಯತೆ ಕಾಯ್ದೆಯ ಗಂಭೀರ ಉಲ್ಲಂಘನೆಯಾಗಿದ್ದು, ಸಂತ್ರಸ್ತರಿಗೆ ಮಾನಸಿಕ ತೊಂದರೆಯನ್ನುಂಟುಮಾಡುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಗೆಳತಿ ಮೇಲೆ ಇಟ್ಟ ಕಣ್ಗಾವಲಿನ ವ್ಯಾಪ್ತಿಯನ್ನು ನಿರ್ಧರಿಸಲು ಹಾಗೂ ದೃಶ್ಯಗಳನ್ನು ಬೇರೆಡೆ ಹಂಚಿಕೊಳ್ಳಲಾಗಿದೆಯೇ ಅಥವಾ ಸಂಗ್ರಹಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.