ಕರಾವಳಿ ಟ್ರೋಲ್ಸ್ ಇನ್ಸ್ಟಾಗ್ರಾಂ ಪೇಜ್ನಿಂದ ಪ್ರಚೋದನಕಾರಿ ಸಂದೇಶ; ತಮಿಳುನಾಡಿನಲ್ಲಿ ಆರೋಪಿಯ ಬಂಧನ

ಮಂಗಳೂರು: ಇನ್ಸ್ಟಾಗ್ರಾಂ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದ ಮೇರೆಗೆ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ದಕ್ಷಿಣ ಕನ್ನಡದ ಮಾಲವಂತಿಗೆ, ಕಿಲ್ಲೂರು ಮನೆ ನಿವಾಸಿ ಮೊಹಮ್ಮದ್ ಕೈಫ್(22) ಬಂಧಿತ ಆರೋಪಿ.
ಕರಾವಳಿ ಟೈರ್ಸ್ ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಜುಲೈ 19ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕರಾವಳಿ ಟೈರ್ಸ್ ಎಂಬ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುತ್ತಿದ್ದ ಆರೋಪಿತನನ್ನು ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ಪತ್ತೆ ಮಾಡಿ, ಆರೋಪಿತನು ತಮಿಳುನಾಡಿಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಬಳಿಕ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಕ್ರಮ ಕೈಗೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿರುತ್ತದೆ.
ಕರಾವಳಿ ಟೈರ್ಸ್ ಎಂಬ ಪೇಜ್ ವಿರುದ್ಧ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ. ಆರೋಪಿಯ ವಿರುದ್ಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಅ.ಕ್ರ. 41/2025 ಕಲಂ. 66(ಸಿ) ಐಟಿ ಕಾಯ್ದೆ ಹಾಗೂ ಕಲಂ. 56, 353(1), 192 ಭಾರತೀಯ ನ್ಯಾಯ ಸಂಹಿತೆ ಅಡಿ ಪ್ರಕರಣ ದಾಖಲಾಗಿರುತ್ತದೆ
