ನ್ಯಾಮತಿಯ ಸರ್ಕಾರಿ ಶಾಲೆಯ ಗೇಟಿಗೆ ಬೀಗ ಹಾಕಿ ಪ್ರತಿಭಟನೆ: ಶಿಕ್ಷಕರ ಗುಂಪುಗಾರಿಕೆ, ಹೊಂದಾಣಿಕೆ ಕೊರತೆಯಿಂದ ಬೇಸತ್ತ ಪೋಷಕರು

ಸೋಗಿಲು(ನ್ಯಾಮತಿ): ‘ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಿದ್ದ ಗುರುಗಳು ವಿದ್ಯಾರ್ಥಿಗಳ ಎದುರೇ ಜಗಳವಾಡುವುದು, ಹೊಂದಾಣಿಕೆ ಇಲ್ಲದ ಶಿಕ್ಷಕರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ’ ಎಂದು ಗ್ರಾಮಸ್ಥರು ಮತ್ತು ಪೋಷಕರು ಶಾಲೆಯ ಗೇಟಿಗೆ ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ನ್ಯಾಮತಿ ತಾಲ್ಲೂಕು ಸೋಗಿಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 90 ವಿದ್ಯಾರ್ಥಿಗಳು ಇದ್ದು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿ ಮೂರು ಜನ ಪುರುಷ ಶಿಕ್ಷಕರು, ಮೂರು ಜನ ಮಹಿಳಾ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಹೊಂದಾಣಿಕೆ ಕೊರತೆಯಿಂದ ಶಾಲೆಯಲ್ಲಿ ಗುಂಪುಗಾರಿಕೆ ಮಾಡಿಕೊಂಡು, ಪ್ರತಿದಿನ ವಿದ್ಯಾರ್ಥಿಗಳ ಎದುರೇ ಜಗಳ ಮಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಎಸ್‌ಡಿಎಂಸಿ ಸದಸ್ಯರು, ಅಧಿಕಾರಿಗಳು ಸಭೆ ನಡೆಸಿ ಸಂಧಾನ ಮಾಡಿದರು ಉಪಯೋಗವಾಗಲಿಲ್ಲ. ಇದರಿಂದ ಬೇಸತ್ತು ಈ ಎಲ್ಲಾ ಶಿಕ್ಷಕರನ್ನು ಬೇರೆಡೆ ನಿಯೋಜನೆ ಮಾಡಿ ಬೇರೆ ಶಿಕ್ಷಕರನ್ನು ಶಾಲೆಗೆ ನೇಮಿಸಿ ಎಂದು ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳನ್ನು ಮಾತ್ರ ಒಳ ಬಿಟ್ಟು, ಶಿಕ್ಷಕರನ್ನು ಬಿಡದೆ ಗೇಟಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ‘ಶಿಕ್ಷಕರಿಗೆ ತಿಳಿವಳಿಕೆ ಹೇಳಿದರೂ ಹೊಂದಾಣಿಕೆ ಕಂಡುಬರದ ಕಾರಣ ಮಹಿಳಾ ಶಿಕ್ಷಕರನ್ನು ಹೊರತುಪಡಿಸಿ ಪುರುಷ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಸ್ವಲ್ಪ ಕಾಲಾವಾಕಶ ಕೊಡಿ’ ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು.
ವಿದ್ಯಾರ್ಥಿಗಳಿಗೆ ಹಾಲು, ಬಿಸಿಯೂಟದ ವ್ಯವಸ್ಥೆಯನ್ನು ಇಲಾಖೆ ಸಂಪನ್ಮೂಲ ವ್ಯಕ್ತಿಗಳು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಟಿ. ಮಲ್ಲೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ಧಪ್ಪ ಬೋವಿ, ಉಪಾಧ್ಯಕ್ಷ ರಮೇಶ ಮತ್ತು ಸದಸ್ಯರು, ಹಿರಿಯರಾದ ಎಸ್.ಬಿ. ತೀರ್ಥಪ್ಪ, ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಈಶ್ವರಪ್ಪ ಮತ್ತು ಸದಸ್ಯರು, ಎ.ಕೆ. ಸಂತೋಷ, ಶಂಕ್ರನಾಯ್ಕ, ಕುಮಾರನಾಯ, ಪೋಷಕರು ಮತ್ತು ಗ್ರಾಮಸ್ಥರು ಇದ್ದರು.
