ಮುಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಚಾಲನೆ: ನ.23ರಂದು ಸಿಜೆಐ ಬಿ.ಆರ್. ಗವಾಯಿ ನಿವೃತ್ತಿ; ಉತ್ತರಾಧಿಕಾರಿಯ ಶಿಫಾರಸು ಕೋರಿದ ಕೇಂದ್ರ ಸರ್ಕಾರ

ನವದೆಹಲಿ: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (BR Gavai) ಅವರು ನ.23ರಂದು ನಿವೃತ್ತಿಯಾಗಲಿದ್ದು, ಈ ಹಿನ್ನೆಲೆ ಮುಂದಿನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆಗೆ ಇದೀಗ ಚಾಲನೆ ಸಿಕ್ಕಿದೆ.

ಸಿಜೆಐ ಬಿಆರ್ ಗವಾಯಿ ಅವರಿಗೆ ಪತ್ರ ಬರೆದಿರೋ ಕೇಂದ್ರ ಸರ್ಕಾರ, ತಮ್ಮ ಉತ್ತರಾಧಿಕಾರಿಯ ನೇಮಕಕ್ಕೆ ಶಿಫಾರಸು ಕೋರಿದೆ. ಈ ಪ್ರಕ್ರಿಯೆಯು ಮುಂದಿನ ಸಿಜೆಐ ನೇಮಕಾತಿ ಕಾರ್ಯವಿಧಾನಕ್ಕೆ ಚಾಲನೆ ಕೊಟ್ಟಿದೆ. ಇದು ಸಾಂಪ್ರದಾಯಿಕವಾಗಿ ಹಾಲಿ ಸಿಜೆಐ ಹುದ್ದೆಯಿಂದ ನಿವೃತ್ತಿಯಾಗುವ ಸುಮಾರು ಒಂದು ತಿಂಗಳ ಮೊದಲು ತೆಗೆದುಕೊಳ್ಳಲಾಗುವ ಹೆಜ್ಜೆಯಾಗಿದೆ.
ಹಿರಿತನದ ಪ್ರಕಾರ, ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಲು ಮುಂದಿನ ಸ್ಥಾನದಲ್ಲಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರ ನಿವೃತ್ತಿಯ ನಂತರ ಅವರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಭೂತಾನ್‌ಗೆ ನಾಲ್ಕು ದಿನಗಳ ಅಧಿಕೃತ ಭೇಟಿಯಲ್ಲಿರುವ ಸಿಜೆಐ ಗವಾಯಿ, ನವದೆಹಲಿಗೆ ಹಿಂದಿರುಗಿದ ನಂತರ ಕೇಂದ್ರ ಸರ್ಕಾರಕ್ಕೆ ತಮ್ಮ ಶಿಫಾರಸನ್ನು ಕಳುಹಿಸುವ ನಿರೀಕ್ಷೆಯಿದೆ.
1962 ಫೆಬ್ರವರಿ 10ರಂದು ಹರಿಯಾಣದ ಹಿಸಾರ್‌ನಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1984ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಸಾಂವಿಧಾನಿಕ, ಸೇವಾ ಮತ್ತು ನಾಗರಿಕ ಕಾನೂನಿನಲ್ಲಿ ಪರಿಣತಿ ಹೊಂದಿರುವ ಅವರು ಹಲವಾರು ವಿಶ್ವವಿದ್ಯಾಲಯಗಳು, ಮಂಡಳಿಗಳು ಮತ್ತು ನಿಗಮಗಳನ್ನು ಪ್ರತಿನಿಧಿಸಿದ್ದರು. 2000ರಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದರು.
2004 ಜನವರಿ 9ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅಕ್ಟೋಬರ್ 5, 2018ರಿಂದ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು, ನಂತರ ಮೇ 24, 2019ರಂದು ಸುಪ್ರೀಂ ಕೋರ್ಟ್ ಬಡ್ತಿ ಪಡೆದರು. ನ್ಯಾಯಮೂರ್ತಿ ಸೂರ್ಯಕಾಂತ್ ಅವರು 2027ರ ಫೆಬ್ರವರಿ 9ರಂದು ನಿವೃತ್ತರಾಗಲಿದ್ದಾರೆ. ಈ ಮೂಲಕ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಸುಮಾರು 15 ತಿಂಗಳ ಅಧಿಕಾರಾ ವಹಿಸಿಕೊಳ್ಳಲಿದ್ದಾರೆ.