ಹಗರಣಗಳ ತನಿಖೆಗೆ ಬ್ರೇಕ್: ನಾಗಮೋಹನ್ ದಾಸ್ ಆಯೋಗವನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ 2019 ರಿಂದ 2023ರವರೆಗೆ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುವ ಹಗರಣಗಳ, ಅದರಲ್ಲೂ ಕೋವಿಡ್ ಸಾಂಕ್ರಾಮಿಕದ ವೇಳೆ ನಡೆದಿತ್ತು ಎನ್ನಲಾದ ಬಹುಕೋಟಿ ರೂಪಾಯಿ ಹಗರಣದ ತನಿಖೆಗೆಂದು ಕಾಂಗ್ರೆಸ್ (Congress) ಸರ್ಕಾರ ಆಯೋಗ ರಚನೆ ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ (Nagamohan Das Commission) ರಚನೆಯಾಗಿತ್ತು. ಇದೀಗ ಆ ಆಯೋಗದ ಅವಧಿ ಮುಗಿಯುವುದಕ್ಕೂ ಮುನ್ನವೇ ವಿಸರ್ಜನೆ ಮಾಡಲಾಗಿದೆ. ಸೆಪ್ಟೆಂಬರ್ 30 ರವರೆಗೆ ಅಧಿಕಾರ ಅವಧಿ ವಿಸ್ತರಿಸುವಂತೆ ಆಯೋಗ ಮನವಿ ಮಾಡಿತ್ತು. ಅದನ್ನು ಸರ್ಕಾರ ಪರಿಗಣಿಸಿಲ್ಲ ಎನ್ನಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಆರೋಪ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ತನಿಖೆ ಜವಾಬ್ದಾರಿಯನ್ನು ಈ ಆಯೋಗಕ್ಕೆ ವಹಿಸಲಾಗಿತ್ತು. ಆಯೋಗಕ್ಕೆ ನೀಡಲಾಗಿದ್ದ ವಾಹನ ಹಾಗೂ ಸಿಬ್ಬಂದಿಯನ್ನು ಸರ್ಕಾರ ಮಂಗಳವಾರ ಸಂಜೆಯಿಂದಲೇ ವಾಪಸ್ ಪಡೆದಿದೆ. ಅಧ್ಯಕ್ಷರ ಸೂಚನೆ ಮೇರೆಗೆ ಆಯೋಗದ ಕಾರ್ಯಚಟುವಟಿಕೆ ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಕಾಮಗಾರಿಗಳಲ್ಲಿ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ಆಯೋಗ, ಆಗಸ್ಟ್ 30 ರಂದು ಸರ್ಕಾರಕ್ಕೆ 8,900 ಪುಟಗಳ ಬೃಹತ್ ತನಿಖಾ ವರದಿಯನ್ನು ಸಲ್ಲಿಸಿತ್ತು. 761 ಕಾಮಗಾರಿಗಳನ್ನು ಪರಿಶೀಲಿಸಿ ಹಲವು ನ್ಯೂನತೆಗಳನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು. ಏಕ ಸದಸ್ಯ ಆಯೋಗದ ಕೆಲಸ ಮುಗಿದಿದ್ದರೂ ಕೆಲವು ಆಡಳಿತಾತ್ಮಕ ಕಾರ್ಯ ಹಾಗೂ ದಾಖಲೆ ನಿರ್ವಾಹಣೆಗಾಗಿ ಸೆ.30 ರ ವರೆಗೆ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು ಎನ್ನಲಾಗಿದೆ. ಆದರೆ, ಸರ್ಕಾರ ಆಯೋಗಕ್ಕೆ ನೀಡಿದ್ದ ಎಲ್ಲಾ ಸವಲತ್ತುಗಳನ್ನು ಏಕಾಏಕಿ ವಾಪಸ್ ಪಡೆದಿದೆ ಎನ್ನಲಾಗುತ್ತಿದೆ.
ಸರ್ಕಾರದ ಖಜಾನೆ ಖಾಲಿಯಾಗಿದೆ: ಆರ್ ಅಶೋಕ್
ಸರ್ಕಾರದ ಈ ನಡೆಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಇದು ಹತ್ತಿದ ಏಣಿ ಒದ್ದಂತೆ. ಕೆಲಸ ಆದ ಮೇಲೆ ಬೆಲೆ ಇಲ್ಲ ಎನ್ನುವ ಧೋರಣೆ ಎಂದು ಕಿಡಿ ಕಾರಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ, ಪಾಪರ್ ಆಗಿದೆ. ಸರ್ಕಾರಕ್ಕೆ ನಾಗಮೋಹನದಾಸ್ ಆಯೋಗಕ್ಕೆ ಕನಿಷ್ಠ ಸವಲತ್ತು ಕೊಡುವ ಯೋಗ್ಯತೆಯೂ ಇಲ್ಲ. ಆಯೋಗಕ್ಕೆ ತಿಂಗಳಿಗೆ ಕನಿಷ್ಠ 10 ಲಕ್ಷ ರೂ. ಕೊಡುವ ಯೋಗ್ಯತೆಯೂ ಇಲ್ಲದಂತೆ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗೆ ಕೊನೆಗೂ ನೇಮಕ: ಜೈಲಿನಲ್ಲಿರುವ ಶಾಸಕನ ಪತ್ನಿಗೂ ಜಾಕ್‌ಪಾಟ್
ಒಟ್ಟಾರೆ, ಬಿಜೆಪಿ ಅವಧಿಯಲ್ಲಿ ಹಗರಣ ಹಾಗೂ ಒಳ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆದರೀಗ ಯಾವುದೇ ಪೂರ್ವ ಸೂಚನೆ ಇಲ್ಲದೇ ಸರ್ಕಾರ ವಾಹನಗಳನ್ನ ವಾಪಾಸ್ ಪಡೆದ ವಿಚಾರ ಸಾಕಷ್ಟು ಚರ್ಚೆಯನ್ನ ಹುಟ್ಟುಹಾಕಿದೆ.
