ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ-ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯ ಬಂಧನ

ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ಪ್ರಶಾಂತ್ ಲೇಔಟ್‌ನ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogans) ಕೂಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಛತ್ತೀಸ್‌ಗಢ ಮೂಲದ 26 ವರ್ಷದ ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದೆ. ಆತ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಆರೋಪಿಯು ಮೇ 9ರ ಮಧ್ಯರಾತ್ರಿ 12.30 ರ ಸಮಯದಲ್ಲಿ, ಪಿಜಿಯಲ್ಲಿದ್ದ ಇತರ ಯುವಕರು ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಸಂಭ್ರಮಿಸುತ್ತಿದ್ದ ವೇಳೆ ಬಾಲ್ಕನಿಯಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂದು ತಿಳಿದುಬಂದಿದೆ.

ಉಗ್ರರು ಬಂದೇ ಬಿಟ್ಟರು ಎಂದು ಹೆದರಿದ್ದ ಯುವಕರು
ಪಾಕಿಸ್ತಾನ ಪರ ಘೋಷಣೆ ಕೇಳುತ್ತಿದ್ದಂತೆಯೇ, ಉಗ್ರರು ಇಲ್ಲಿಗೂ ಬಂದೇ ಬಿಟ್ಟರು ಎಂದು ಇತರ ಯುವಕರು ಭೀತಿಗೊಳಗಾಗಿದ್ದಾರೆ. ಪಿಜಿಯಲ್ಲಿದ್ದ ಇನ್ನಿತರ ಯುವಕರು ಭಯಗೊಂಡು ಹೊರಗೆ ಬಂದಾಗ, ಎರಡು ಮಂದಿ ಬಾಲ್ಕನಿಯಲ್ಲಿ ನಿಂತಿರುವುದು ಕಾಣಿಸಿದೆ. ಆ ಇಬ್ಬರಲ್ಲಿ ಒಬ್ಬನಾದ ಶುಭಾಂಶು ಪಾಕ್ ಪರ ಘೋಷಣೆ ಕೂಗುತ್ತಿದ್ದುದು ಕಾಣಿಸಿದೆ. ಎದುರಿನ ಪಿಜಿಯಲ್ಲಿದ್ದ ಯುವಕ ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ. ನಂತರ ಅಲ್ಲಿದ್ದ ಯುವಕರು ತುರ್ತು ಸಹಾಯವಾಣಿ ಸಂರ್ಖಯೆ 112 ಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಶುಭಾಂಶು ಪಾಕ್ ಪರ ಘೋಷಣೆ ಕೂಗಿದ್ದು ವಿಚಾರಣೆ ವೇಳೆ ದೃಢಪಟ್ಟಿದ್ದು, ವೈಟ್‌ಫೀಲ್ಡ್ ಠಾಣೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ.
ಕರ್ನಾಟಕದಲ್ಲಿ ಹೆಚ್ಚುತ್ತಿದೆ ಪಾಕಿಸ್ತಾನ ಪರ ಘೋಷಣೆ, ಪೋಸ್ಟ್ ಪ್ರಕರಣ
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವುದು, ಪಾಕ್ ಪರ ಸಹಾನುಭೂತಿಯ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿರುವ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚುತ್ತಿರುವುದು ತಿಳಿದುಬಂದಿದೆ. ಕೆಲವೇ ದಿನಗಳ ಹಿಂದಷ್ಟೇ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಪಾಕಿಸ್ತಾನದ ಪರ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದರು. ಅದರ ಬೆನ್ನಲ್ಲೇ, ಬೆಂಗಳೂರಿನಲ್ಲಿ ಯುವಕನೊಬ್ಬ, ‘‘ಪ್ರಧಾನಿ ಮೋದಿ ನಿವಾಸಕ್ಕೆ ಬಾಂಬ್ ಹಾಕಬೇಕೆಂದು’’ ವಿಡಿಯೋ ವೈರಲ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
‘‘ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಯಾಕೆ ಪಾಕಿಸ್ತಾನ ಬಾಂಬ್ ಹಾಕಿಲ್ಲ? ಜನರೆಲ್ಲನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು ಮೋದಿ. ಮೊದಲು ಮೋದಿ ಮನೆ ಮೇಲೆ ಬಾಂಬ್ ಹಾಕಬೇಕು” ಎಂದು ವಿಡಿಯೋದಲ್ಲಿ ಹೇಳಿದ್ದ ನವಾಜ್ ಎಂಬಾತನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅದರ ಬೆನ್ನಲ್ಲೇ, ಪಿಜಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವಿಚಾರ ಬೆಳಕಿಗೆ ಬಂದಿದೆ.