100ಕ್ಕೂ ಹೆಚ್ಚು ಅಪರಾಧಗಳ ಕೈದಿ ಪೊಲೀಸ್ ಕಸ್ಟಡಿಯಿಂದ ಪರಾರಿ

ಆಂಧ್ರಪ್ರದೇಶ: ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಕೈದಿ ಬಟ್ಟುಲ ಪ್ರಭಾಕರ್ ಎಂಬಾತ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಸುಮಾರು 35 ವರ್ಷ ವಯಸ್ಸಿನ ಪ್ರಭಾಕರ್, ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ನ್ಯಾಯಾಲಯದ ವಿಚಾರಣೆಯ ನಂತರ ವಿಜಯವಾಡದಿಂದ ಕರೆತರಲಾಗುತ್ತಿತ್ತು. ದೇವರಪಲ್ಲಿ ಮಂಡಲದ ದುಡ್ಡುಕುರು ಗ್ರಾಮದ ಬಳಿ ಸಂಜೆ 7.30 ರ ಸುಮಾರಿಗೆ ಒಂದು ಕೈಯಲ್ಲಿ ಕೈಕೋಳ ಧರಿಸಿ ಪರಾರಿಯಾಗಿದ್ದ ಎಂದು ವರದಿಯಾಗಿದೆ. ತಪ್ಪಿಸಿಕೊಳ್ಳುವ ಸಮಯದಲ್ಲಿ, ಆತ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ.

ಆತನ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರನ್ನು ಕೋರಿದ್ದಾರೆ. ಜನರು ದೇವರಪಲ್ಲಿ ಇನ್ಸ್‌ಪೆಕ್ಟರ್ ಅವರನ್ನು 94407 96584 ಅಥವಾ ಸಬ್-ಇನ್‌ಸ್ಪೆಕ್ಟರ್ ಅವರನ್ನು 94407 96624 ಗೆ ಸಂಪರ್ಕಿಸಬಹುದು. ಆತನನ್ನು ಹಿಡಿಯಲು ಕಾರಣವಾಗುವ ವಿಶ್ವಾಸಾರ್ಹ ಸುಳಿವು ನೀಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ.
ಪ್ರಭಾಕರ್ ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ 100 ಕ್ಕೂ ಹೆಚ್ಚು ಕಳ್ಳತನ ಮತ್ತು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿರುವ ಅಪರಾಧಿ. ಈ ಹಿಂದೆ 2020 ರಲ್ಲಿ ವಿಶಾಖಪಟ್ಟಣದಲ್ಲಿ ಆತನನ್ನು ಬಂಧಿಸಲಾಗಿತ್ತು ಮತ್ತು ಮಾರ್ಚ್ 2022 ರಲ್ಲಿ ನ್ಯಾಯಾಲಯದಿಂದ ಜೈಲಿಗೆ ಸಾಗಿಸುವಾಗ ಬಂಧನದಿಂದ ತಪ್ಪಿಸಿಕೊಂಡಿದ್ದ.
ಹೈದರಾಬಾದ್‌ನ ಗಚಿಬೌಲಿಯ ಪಬ್‌ನಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯ ನಂತರ ಫೆಬ್ರವರಿ 2025 ರಲ್ಲಿ ಆತನನ್ನು ಮತ್ತೆ ಬಂಧಿಸಲಾಗಿತ್ತು.
ಕೇರಳದಲ್ಲಿ ಮತ್ತೊಂದು ಘಟನೆ 2011ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಗೋವಿಂದಚಾಮಿ ಎಂಬ ಕೈದಿ, ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಿಂದ ಶುಕ್ರವಾರ ಬೆಳಗಿನ ಜಾವ ದುಸ್ಸಾಹಸದಿಂದ ತಪ್ಪಿಸಿಕೊಂಡಿದ್ದ. ಆದರೆ, ಕೆಲವೇ ಗಂಟೆಗಳಲ್ಲಿ ಪೊಲೀಸರು ತಲಪ್ಪು ಪ್ರದೇಶದಲ್ಲಿ ಪಾಳು ಬಂಗಲೆಯ ಬಾವಿಯೊಳಗೆ ಅಡಗಿದ್ದ ಆತನನ್ನು ಸೆರೆ ಹಿಡಿದಿದ್ದರು. ಗೋವಿಂದಚಾಮಿಯ ತಪ್ಪಿಸಿಕೊಳ್ಳುವಿಕೆಯು ಕೇರಳದ ಜನರಲ್ಲಿ ಆತಂಕವನ್ನುಂಟುಮಾಡಿತ್ತು.
