ಲೋಕಸಭೆಯಲ್ಲಿ ಪ್ರಧಾನಿ ಭಾಷಣ ರದ್ದುವಿರೋಧ ಪಕ್ಷಗಳ ಗದ್ದಲ

ನವದೆಹಲಿ: ನಿನ್ನೆ ಸಂಜೆ ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಬೇಕಿತ್ತು. ಆದರೆ, ಇನ್ನೇನು ಮೋದಿ ತಮ್ಮ ಮಾತು ಆರಂಭಿಸಬೇಕು ಎನ್ನುವಷ್ಟರಲ್ಲಿ ಸದನದಲ್ಲಿ ಇದ್ದಕ್ಕಿದ್ದಂತೆ ಗದ್ದಲ ಆರಂಭವಾಯಿತು. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಗಳ ಅಂಶಗಳನ್ನು ಉಲ್ಲೇಖಿಸಲು ಸದನದಲ್ಲಿ ಅವಕಾಶ ನೀಡದ ಕಾರಣದಿಂದ ವಿರೋಧ ಪಕ್ಷಗಳ ಸಂಸದರು ಗಲಾಟೆ ಆರಂಭಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರು ಪ್ರಧಾನಿ ಮೋದಿ ಕುಳಿತಿದ್ದ ಕುರ್ಚಿಯನ್ನು ಸುತ್ತುವರೆದರು.

ನಿನ್ನೆ ಸಂಜೆ ಪ್ರಧಾನಿ ಮೋದಿ ಮಾತನಾಡುವ ಸ್ವಲ್ಪ ಮೊದಲು ವರ್ಷಾ ಗಾಯಕ್ವಾಡ್ ಮತ್ತು ಜ್ಯೋತಿಮಣಿ ಸೇರಿದಂತೆ ವಿರೋಧ ಪಕ್ಷದ ಕೆಲವು ಮಹಿಳಾ ಸಂಸದರು ಪ್ರಧಾನಿ ಮೋದಿ ಅವರ ಕುರ್ಚಿಯ ಸುತ್ತ ಮುತ್ತಿಗೆ ಹಾಕಿದರು. ಬ್ಯಾನರ್ಗಳನ್ನು ಹಿಡಿದು ಬಾವಿಗಿಳಿದ ಮಹಿಳಾ ಸಂಸದರು ಗದ್ದಲ ಆರಂಭಿಸಿದರು. ಮೊನ್ನೆ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ಅವರ ಪ್ರತಿಭಟನೆ ನಡೆಯಿತು. ಇದರಿಂದ ಪ್ರಧಾನಿ ಮೋದಿಯವರಿಗೆ ಭಾಷಣ ಮಾಡಲು ಸಾಧ್ಯವಾಗಲಿಲ್ಲ.

ಹೀಗಾಗಿ, ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಸಂಧ್ಯಾ ರೈ ಕಲಾಪವನ್ನು ಇಂದಿಗೆ ಮುಂದೂಡಿದರು. ಹಲವಾರು ಸಚಿವರು ಹೊರಹೋದ ನಂತರ ಮಹಿಳಾ ಸಂಸದರು ತಮ್ಮ ಮುತ್ತಿಗೆಯನ್ನು ಕೊನೆಗೊಳಿಸಿದರು. ಮಹಿಳಾ ಸಂಸೆಯರು ಮೊದಲೇ ಪ್ಲಾನ್ ಮಾಡಿ ಬೇಕೆಂದೇ ಪ್ರಧಾನಿ ಮೋದಿಯವರು ಭಾಷಣ ಮಾಡದಂತೆ ತಡೆದರು ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿಯೇ ಮಹಿಳಾ ಸಂಸದರನ್ನು ಛೂ ಬಿಟ್ಟಿದ್ದರು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಮಹಿಳಾ ಸಂಸದರ ಮುತ್ತಿಗೆಯಿಂದಾಗಿ ಧನ್ಯವಾದ ನಿರ್ಣಯವನ್ನು ಲೋಕಸಭೆ ಇನ್ನೂ ಅಂಗೀಕರಿಸಿಲ್ಲ. ಸದನವನ್ನು ಇಂದಿನವರೆಗೆ ಮುಂದೂಡಲಾಗಿತ್ತು. ಆದ್ದರಿಂದ ಇಂದು ಚರ್ಚೆ ಮುಂದುವರಿಯುವ ಸಾಧ್ಯತೆಯಿದೆ