ಕರ್ನಾಟಕದಲ್ಲಿ 458 ಕೋಟಿ ವೆಚ್ಚದ ರೈಲ್ವೆ ಕಾಮಗಾರಿಗೆ ಸಿದ್ಧತೆ

ಬೆಂಗಳೂರು: ಕರ್ನಾಟಕ ರೈಲ್ವೆ ಮೂಲ ಸೌಕರ್ಯ ವರ್ಷದಿಂದ ವರ್ಷ ಅಭಿವೃದ್ಧಿಯಾಗುತ್ತಿದೆ. ಹೊಸ ಮಾರ್ಗದಲ್ಲಿ ರೈಲುಗಳು ಕಾರ್ಯಾಚರಣೆ ಆರಂಭಿಸಿವೆ. ಶೀಘ್ರವೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆ ಆರಂಭಿಸಲಿವೆ. ಈ ಮಧ್ಯ ಕರ್ನಾಟಕದಲ್ಲಿ ಮತ್ತೊಂದು ಮಹತ್ವದ ರೈಲ್ವೆ ಕಾಮಗಾರಿಗೆ ಬರೋಬ್ಬರಿ 458 ಕೋಟಿ.
ರೂ. ಅನುದಾನವನ್ನು ಮೀಸಲಿಡಲಾಗಿದೆ. ಇದರಿಂದ ಕೆಲವು ಜಿಲ್ಲೆಗಳ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇದೇ ವಿಚಾರ ಬಹಿರಂಗಪಡಿಸಿದರು. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ರೈಲ್ವೆ ಮಾರ್ಗದಲ್ಲಿ ಮಹತ್ವ ಕಾಮಗಾರಿ ಆರಂಭವಾಗಲಿದೆ. ತೋರಣಗಲ್ಲು – ರಂಜಿತ್‌ಪುರ ನಡುವಿನ 23 ಕಿ.ಮೀ ಉದ್ದದ ರೈಲ್ವೆ ದ್ವಿಪಥೀಕರಣಕ್ಕೆ ಮಂಜೂರಾತಿ ನೀಡಲಾಗಿದೆ. ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಸಚಿವಾಲಯದಿಂದ ಬರೋಬ್ಬರಿ 458 ಕೋಟಿ. ರೂ. ಅನುದಾನವನ್ನು ಈ ಕಾಮಗಾರಿಗೆ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.
ತೋರಣಗಲ್ಲು- ರಂಜಿತ್‌ಪುರ ಮಾರ್ಗದ ರೈಲು ಹಳಿ ಏಕಪಥ ಇದೆ. ಅದರ ದ್ವೀಪಥೀಕರಣ ಕಾರ್ಯ ಮುಂದಿನ ದಿನಗಳಲ್ಲಿ ಶುರುವಾಗಲಿದೆ. ಈ ಭಾಗದಲ್ಲಿ ಸಹ ಗೂಡ್ಸ್ ಸಾಗಾಣೆ, ಪ್ರಯಾಣಿಕರ ಸಂಚಾರ ಹೆಚ್ಚಿರುತ್ತದೆ. ಕಬ್ಬಿಣದ ಅದಿರು, ಬಹು ವಿಧದ ಕಾರ್ಗೋ ಟರ್ಮಿನಲ್ ಅಭಿವೃದ್ಧಿಗೆ ಅನುಕೂಲ ಸೇರಿದಂತೆ ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳವಾಗಲಿದೆ. ದ್ವಿಪಥೀಕರಣ ಪೂರ್ಣಗೊಂಡ ನಂತರ ವಾರ್ಷಿಕವಾಗಿ 5.64 ಮಿಲಿಯನ್ ಟನ್‌ಗಳಷ್ಟು ಹೆಚ್ಚುವರಿ ಸರಕು ಸಾಗಣೆಗೆ ನಿರೀಕ್ಷೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ವಿವಿಧ ಜಿಲ್ಲೆಗಳಿಗೆ ಅನುಕೂಲ
ಈ ರೈಲ್ವೆ ಲೈನ್ ದ್ವಿಪಥಗೊಳಿಸುವುದರಿಂದ ಬಳ್ಳಾರಿ, ಕೊಪ್ಪಳ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ರೈಲ್ವೆ ಸಂಚಾರ ಸುಗಮನಗೊಳ್ಳುತ್ತದೆ. ಕೈಗಾರಿಕೆ, ವಿದ್ಯಾಭ್ಯಾಸ, ವ್ಯಾಪಾರ ವಹೀವಾಟಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಪ್ರಯಾಣಿಕರಿಗೆ ಮತ್ತಷ್ಟು ಸುಸೂತ್ರ ಸಾರಿಗೆ ವ್ಯವಸ್ಥೆ ನೀಡಿದಂತಾಗುತ್ತದೆ. ದೈನದಂದಿನ ರೈಲ್ವೆ ಸಂಚಾರ ಸುಗಮಗೊಳ್ಳುತ್ತದೆ.
ಕರ್ನಾಟಕದಲ್ಲಿ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಮೈಸೂರು, ಬೆಂಗಳೂರು-ಕಲಬುರಗಿ, ಹಾಸನ-ದಾವಣಗೆರೆ, ಹುಬ್ಬಳ್ಳಿ-ಪುಣೆ ಹೀಗೆ ಬಹುತೇಕ ರೈಲ್ವೆ ಮಾರ್ಗಗಳು ದ್ವಿಪಥೀಕರಣ ಗೊಂಡಿವೆ. ಮುಂದಿನ ದಿನಗಳಲ್ಲಿ ತೋರಣಗಲ್ಲು-ರಂಜಿತ್‌ಪುರ ಸೇರಿದಂತೆ ಇತರ ಕಡಿಮೆ ದೂರದ ರೈಲ್ವೆ ಮಾರ್ಗಗಳು ಸಹ ದ್ವಿಪಥ ಮಾರ್ಗಗಳು ಹಾಗೂ ವಿದ್ಯುದೀಕರಣಗೊಳ್ಳಲಿವೆ.
