160 ರೂ.ಗೆ ಏರಿಕೆಯಾದ ಪ್ರೀಮಿಯಂ ಪೆಟ್ರೋಲ್; ಡೀಸೆಲ್ ದರದಲ್ಲೂ ಹೆಚ್ಚಳ

ಹೊಸದಿಲ್ಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದೆ. ಇದೇ ವೇಳೆ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಮಾಡಲಾಗಿದ್ದ ಎಟಿಎಫ್ ಬೆಲೆ ಏರಿಕೆಯನ್ನು ಹಿಂಪಡೆದು, ಉಳಿದಂತೆ ಎಟಿಎಫ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
XP100 ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಇದೀಗ ಪ್ರತಿ ಲೀಟರ್ ಗೆ 160ರೂ.ಗೆ ಏರಿಕೆಯಾಗಿದೆ. Xtra Green ಪ್ರೀಮಿಯಂ ಡೀಸೆಲ್ ಬೆಲೆ ಇದೀಗ ಪ್ರತಿ ಲೀಟರ್ ಗೆ 92.99 ರೂ. ಆಗಿದೆ. ಇದಕ್ಕೂ ಮುನ್ನ ಅದರ ಬೆಲೆ 91.49 ರೂ. ಆಗಿತ್ತು. XP100 ಆಕ್ಟೇನ್ ಪೆಟ್ರೋಲ್ ಆಗಿದೆ. ಈ ಪೆಟ್ರೋಲ್ ಅನ್ನು ಅತ್ಯಾಧುನಿಕ ಕಾರುಗಳು ಹಾಗೂ ಸೂಪರ್ ಬೈಕ್ ಗಳ ಇಂಜಿನ್ ಸಾಮರ್ಥ್ಯ ವನ್ನು ವೃದ್ಧಿಸಲು ಬಳಸಲಾಗುತ್ತದೆ.
ಈ ಬೆಲೆ ಏರಿಕೆಗೆ ಕಾರಣವೇನು ಎಂದು ಇಂಡಿಯನ್ ಆಯಿಲ್ ಇದುವರೆಗೆ ಯಾವುದೇ ಅಧಿಕೃತ ಕಾರಣ ಬಿಡುಗಡೆ ಮಾಡಿಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಪೂರೈಕೆ ಸರಪಣಿಯಲ್ಲಿನ ಅಡಚಣೆಯಿಂದಾಗಿ ಜಾಗತಿಕ ತೈಲ ಮತ್ತು ಇಂಧನ ಬೆಲೆಗಳು ಏರಿಕೆಯಾಗಿರುವ ಬೆನ್ನಿಗೆ ಈ ಬೆಲೆ ಏರಿಕೆ ಮಾಡಲಾಗಿದೆ.
