ಪ್ರಜ್ವಲ್ ರೇವಣ್ಣ ಅತ್ಯಾಚಾರ ದೋಷಿ: ಯಾವ ಶಿಕ್ಷೆ ಮತ್ತು ಶಿಕ್ಷೆಯ ಪ್ರಮಾಣ

ಕೆ.ಆರ್. ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾಗಿದೆ. ನ್ಯಾಯಾಲಯವು ಸಾಕ್ಷ್ಯ ಮತ್ತು ಪುರಾವೆಗಳನ್ನು ಪರಿಗಣಿಸಿ ಈ ತೀರ್ಪು ನೀಡಿದೆ. ಹಾಗಾದ್ರೆ, ಪ್ರಜ್ವಲ್ ರೇವಣ್ಣಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು? ಹಾಗೇ ಮಾಜಿ ಸಂಸದನ ಮುಂದಿನ ನಡೆ ಏನು? ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, (ಆಗಸ್ಟ್ 01): ಕೆ.ಆರ್. ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶ ಗಜಾನನ ಭಟ್ ತೀರ್ಪು ನೀಡುದ್ದಂತೆಯೇ ಪ್ರಜ್ವಲ್ ರೇವಣ್ಣ ಕೋರ್ಟ್ ನಲ್ಲೇ ಕಣ್ನೀರಿಟ್ಟರು. ಇನ್ನು ಕೋರ್ಟ್, ನಾಳೆ(ಆಗಸ್ಟ್ 02) ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದು, ಎಷ್ಟು ವರ್ಷ ಶಿಕ್ಷೆ ನೀಡಲಿದೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ. ಈ ಪ್ರಕರಣದಲ್ಲಿ ಕನಿಷ್ಟ 10 ವರ್ಷ, ಗರಿಷ್ಠ ಜೀವಿತಾವಧಿ ವರೆಗೂ ಶಿಕ್ಷೆ ವಿಧಿಸುವ ವಿವೇಚನಾಧಿಕಾರವನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹೊಂದಿದೆ.

ಇನ್ನು ನಾಳೆ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ- ಪ್ರತಿವಾದವನ್ನ ಕೋರ್ಟ್ ಆಲಿಸಲಿದೆ. ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡಿಸುವ ಸಾಧ್ಯತೆ ಇದೆ. ಇನ್ನು ಕಡಿಮೆ ಶಿಕ್ಷೆ ನೀಡಿ ಎಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡುವ ಸಾಧ್ಯತೆಯೂ ಇದೆ. ಆದ್ರೆ, ಈ ವಾದ ಪ್ರತಿವಾದ ಆಲಿಸಿ ಕೋರ್ಟ್ ಎಷ್ಟು ಪ್ರಮಾಣ ಶಿಕ್ಷೆ ವಿಧಿಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಎಷ್ಟು ವರ್ಷ ಶಿಕ್ಷೆಗೆ ಅವಕಾಶ ಇದೆ?
ಬಿಎನ್ಎಸ್ 376(2) (k), 376 (2) (n), 354 (a) (b) (c), 506 ಮತ್ತು 201, IT ACT 66(E) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 376(2) (k) ಮತ್ತು 376 (2) (n) ಕನಿಷ್ಟ 10 ವರ್ಷ, ಗರಿಷ್ಠ ಜೀವಿತಾವಧಿ ವರೆಗೂ ಶಿಕ್ಷೆ ವಿಧಿಸುವ ವಿವೇಚನಾಧಿಕಾರವನ್ನು ಕೋರ್ಟ್ ಹೊಂದಿದೆ.
ಅದೇ ರೀತಿ 354 (a) (b) (c) ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೇ ಸೆಕ್ಷನ್ 506 ಅಡಿಯಲ್ಲಿ 6 ತಿಂಗಳು, 201 ಬಿಎನ್ಎಸ್ ಅಡಿಯಲ್ಲಿ ಕನಿಷ್ಠ 1 ವರ್ಷದಿಂದ 7 ವರ್ಷ ಶಿಕ್ಷೆ ನೀಡಬಹುದು. ಹಾಗೆಯೇ ಸೆಕ್ಷನ್ 66(E) of ಐಟಿ ಆ್ಯಕ್ಟ್ 2008 ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸುವ ಅವಕಾಶಗಳಿವೆ.
ಪ್ರಜ್ವಲ್ ರೇವಣ್ಣನ ಮುಂದಿನ ನಡೆ ಏನು?
ಇನ್ನು ದೋಷಿಯಾಗಿರುವ ಪ್ರಜ್ವಲ್ ರೇವಣ್ಣನವರ ಮುಂದಿನ ನಡೆ ಏನು ಎನ್ನುವುದನ್ನು ನೋಡುವುದಾದರೆ, ನಾಳೆ ಕೋರ್ಟ್ ನೀಡುವ ಶಿಕ್ಷೆ ಪ್ರಮಾಣದ ಮೇಲೆ ನಿಂತಿದೆ. ಶಿಕ್ಷೆ ಪ್ರಮಾಣವನ್ನು ಕೋರ್ಟ್ ನೀಡಿದ ಬಳಿಕ ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ ಮೊರೆ ಹೋಗುವ ಅವಕಾಶಗಳು ಇವೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿರುವ ಶಿಕ್ಷೆಗೆ ತಡೆ ಅಥವಾ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು. ಹಾಗೇ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್ ಮೋರೆ ಹೋಗಬಹುದು.
ಅಲ್ಲದೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ತೀರ್ಪು ರದ್ದುಗೊಳಿಸುವಂತೆ ಅರ್ಜಿಸುವ ಅವಕಾಶ ಸಹ ಪ್ರಜ್ವಲ್ ರೇವಣ್ಣ ಮುಂದೆ ಇದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಪರ ವಕೀಲರು ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಒಂದು ವೇಳೆ ಪ್ರಜ್ವಲ್ ಪರ ವಕೀಲರು ಸಲ್ಲಿಸುವ ಅರ್ಜಿಗೆ ಹೈಕೋರ್ಟ್, ತಡೆ ನೀಡಬಹುದು, ಇಲ್ಲ ಜನಪ್ರತಿನಿಧಿಗಳ ಕೋರ್ಟ್ ನೀಡಿದ ಶಿಕ್ಷೆ ಪ್ರಮಾಣದಲ್ಲಿ ಕೊಂಚ ಕಡಿಮೆ ಮಾಡಬಹುದು. ಒಂದು ವೇಳೆ ಹೈಕೋರ್ಟ್ , ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶವನ್ನು ಎತ್ತಿ ಹಿಡಿದರೆ ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಹುದು.
ಒಂದು ವೇಳೆ ಸುಪ್ರೀಂಕೋರ್ಟ್ನಲ್ಲೂ ಕೆಳ ನ್ಯಾಯಾಲಯದ ಆದೇಶದ ಎತ್ತಿಹಿಡಿದರೆ ಪ್ರಜ್ವಲ್ ರೇವಣ್ಣಗೆ ಜೈಲೇ ಗತಿಯಾಗುವುದು ಗ್ಯಾರಂಟಿ. ಹೀಗಾಗಿ ನಾಳಿನ ಶಿಕ್ಷೆ ಪ್ರಮಾಣದ ತೀರ್ಪಿನ ಬಳಿಕ ಪ್ರಜ್ವಲ್ ರೇವಣ್ಣನ ನಡೆ ಕುತೂಹಲ ಮೂಡಿಸಿದೆ.
