ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ: ವರ್ಷಕ್ಕೆ ₹436ಕ್ಕೆ ₹2 ಲಕ್ಷ ಜೀವ ವಿಮೆ

ಭಾರತದಲ್ಲಿ ವಿಮಾ ಪ್ರೀಮಿಯಂ ದುಬಾರಿಯಾಗಿರುವುದರಿಂದ ಅನೇಕರು ಜೀವ ವಿಮಾ ಖರೀದಿಸಲು ಹಿಂದೇಟು ಹಾಕುತ್ತಾರೆ. ವಿಶೇಷವಾಗಿ ಕೊರೋನಾ ಮಹಾಮಾರಿಯ ನಂತರ ವಿಮಾ ಕಂಪನಿಗಳು ತಮ್ಮ ಪ್ರೀಮಿಯಂ ದರಗಳನ್ನು ಹೆಚ್ಚಿಸಿದ್ದರಿಂದ, ಸಾಮಾನ್ಯ ಜನರಿಗೆ ವಿಮಾ ಪಾಲಿಸಿಗಳು ಇನ್ನಷ್ಟು ದುಬಾರಿಯಾಗಿ ತೋರಿಸುತ್ತಿವೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕಡಿಮೆ ವೆಚ್ಚದ ವಿಮಾ ಯೋಜನೆಗಳನ್ನು ಪರಿಚಯಿಸುವತ್ತ ಗಮನಹರಿಸಿದೆ.ಅವುಗಳಲ್ಲಿ ಪ್ರಮುಖವಾದುದು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY). ಈ ಯೋಜನೆಯು ವಾರ್ಷಿಕವಾಗಿ ಕೇವಲ ₹436 ಪ್ರೀಮಿಯಂಗೆ ಲಭ್ಯವಿದ್ದು, ತಿಂಗಳಿಗೆ ನೋಡಿ ₹36 ಮಾತ್ರ.PMJJBY ಯೋಜನೆ ಉದ್ದೇಶವೇನಂದರೆ ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಇದು ಆರ್ಥಿಕ ಸುರಕ್ಷತೆಗೆ ಸಹಾಯ ಮಾಡುವ ಉತ್ತಮ ಮಾರ್ಗವಾಗಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)ಯು ಯಾವುದೇ ಕಾರಣದಿಂದ ಮರಣ ಹೊಂದಿದರೆ ಜೀವ ವಿಮಾ ರಕ್ಷಣೆಯನ್ನು ಒದಗಿಸುವ ಕಡಿಮೆ ವೆಚ್ಚದ ವಿಮಾ ಯೋಜನೆ ಆಗಿದೆ. ಈ ಯೋಜನೆಯು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಸುರಕ್ಷತೆಯನ್ನು ಒದಗಿಸಲು ಕೇಂದ್ರ ಸರ್ಕಾರದ ಪ್ರಮುಖ ಹೆಜ್ಜೆವಾಗಿದೆ. ಇದನ್ನು ಎಲ್ಐಸಿ ಹಾಗೂ ಇತರ ಮಾನ್ಯತೆ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲಾಗುತ್ತದೆ.ಈ ಯೋಜನೆಯು ಒಂದು ವರ್ಷದ ಅವಧಿಯದಾಗಿದ್ದು, ಪ್ರತಿ ವರ್ಷ ನವೀಕರಿಸಬಹುದಾದವುದಾಗಿದೆ. ಬ್ಯಾಂಕುಗಳೊಂದಿಗೆ ಅಗತ್ಯ ಅನುಮೋದನೆಗಳು ಮತ್ತು ಒಪ್ಪಂದಗಳೊಂದಿಗೆ ಈ ಯೋಜನೆ ಕಾರ್ಯಗತಗೊಳ್ಳುತ್ತದೆ. ಪಾಲುದಾರ ಬ್ಯಾಂಕುಗಳು ತಮ್ಮ ಖಾತೆದಾರರಿಗೆ ಯೋಜನೆಯನ್ನು ಅನುಷ್ಟಾನ ಮಾಡುವ ಉದ್ದೇಶದಿಂದ ಯಾವುದೇ ಜೀವ ವಿಮಾ ಕಂಪನಿಯನ್ನು ತೊಡಗಿಸಿಕೊಳ್ಳಲು ಮುಕ್ತವಾಗಿರುತ್ತವೆ.
ಈ ವಿಮೆಯನ್ನು ಯಾರು ತೆಗೆದುಕೊಳ್ಳಬಹುದು?
18 ರಿಂದ 50 ವರ್ಷದೊಳಗಿನ ನಾಗರಿಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ವಿವಿಧ ಬ್ಯಾಂಕ್ಗಳು/ಪೋಸ್ಟ್ ಆಫೀಸ್ಗಳಲ್ಲಿ ಒಂದು ಅಥವಾ ಹಲವಾರು ಖಾತೆಗಳನ್ನು ಹೊಂದಿದ್ದರೆ, ವ್ಯಕ್ತಿಯು ಈ ವಿಮೆಯ ಪ್ರೀಮಿಯಂ ಅನ್ನು ಕೇವಲ ಒಂದು ಖಾತೆಯ ಮೂಲಕ ಪಾವತಿಸಬೇಕಾಗುತ್ತದೆ. ಈ ವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು.ನಿಮ್ಮ ಬ್ಯಾಂಕ್ ಖಾತೆಯಲ್ಲಿ 436 ರೂ.ಗಳ ಬ್ಯಾಲೆನ್ಸ್ ಇಲ್ಲದಿದ್ದರೆ, ನಿಮ್ಮ ವಿಮೆ ಸ್ವಯಂಚಾಲಿತವಾಗಿ ರದ್ದಾಗಬಹುದು. ವಿಮೆ ರದ್ದಾದರೆ ಈ ಯೋಜನೆಯ ಲಾಭ ಪಡೆಯುವುದು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕಾಗಿ ಬ್ಯಾಂಕ್ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಎಚ್ಚರಿಕೆ ನೀಡುತ್ತಿದೆ.
ಈ ಯೋಜನೆಯಲ್ಲಿ ಎಷ್ಟು ವಿಮೆ ಸಿಗುತ್ತದೆ?
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ, ವರ್ಷಕ್ಕೆ ಕೇವಲ ₹436 (ಅಂದರೆ ತಿಂಗಳಿಗೆ ₹36) ಪ್ರೀಮಿಯಂ ಪಾವತಿಸಿ, ಫಲಾನುಭವಿಗಳಿಗೆ ₹2 ಲಕ್ಷಗಳ ಜೀವ ವಿಮಾ ರಕ್ಷಣೆ ಲಭ್ಯವಿರುತ್ತದೆ.ಈ ವಿಮೆ ಅನಿವಾರ್ಯ ಘಟನೆಗಳಾದ ಅಪಘಾತ ಅಥವಾ ನೈಸರ್ಗಿಕ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ವೈದ್ಯಕೀಯ ವೆಚ್ಚಗಳಿಂದ ಅಥವಾ ಕಠಿಣ ಪರಿಸ್ಥಿತಿಗಳಿಂದ ತತ್ತರಿಸಿದ ಕುಟುಂಬಗಳಿಗೆ ಇದು ಒಂದಷ್ಟು ನಿಟ್ಟುಸಿರು ತರುವಂತಹ ಯೋಜನೆ.ಈ ಯೋಜನೆಗೆ ಸೇರಿದ್ದರೆ ಆದಾಯ ತೆರಿಗೆ ಕಾಯ್ದೆ ಧಾರಾ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯುವ ಸಹಾಯವೂ ಲಭ್ಯವಿದೆ. ಕಡಿಮೆ ವೆಚ್ಚದಲ್ಲಿ ಕೈಗೆಟುಕುವ ಈ ಯೋಜನೆ, ಸಾಮಾನ್ಯ ಜನರಿಗಾಗಿ ರೂಪುಗೊಳ್ಳಲಾದ ಸರಳ ಆದರೆ ಪರಿಣಾಮಕಾರಿ ವಿಮಾ ಪಥವಾಗಿದೆ.
ಕ್ಲೈಮ್ ಇತ್ಯರ್ಥ ಪ್ರಕ್ರಿಯೆ – PMJJBY ಅಡಿಯಲ್ಲಿ ಮೃತ ವ್ಯಕ್ತಿಯ ಕುಟುಂಬದವರು ಅಥವಾ ನಾಮಿನಿಯವರು ಮರಣದ ವಿಮಾ ಕ್ಲೈಮ್ ಪಡೆಯಲು ಈ ಹಂತಗಳನ್ನು ಅನುಸರಿಸಬೇಕು:
ಬ್ಯಾಂಕ್ ಸಂಪರ್ಕ:
ಮೊದಲಿಗೆ, ಮೃತ ವ್ಯಕ್ತಿಯು ವಿಮಾ ಪಡೆಯಿದ್ದ ಉಳಿತಾಯ ಬ್ಯಾಂಕ್ ಖಾತೆ ಇರುವ ಬ್ಯಾಂಕನ್ನು ನಾಮಿನಿಯವರು ಸಂಪರ್ಕಿಸಬೇಕು. ಅವರ ಮರಣ ಪ್ರಮಾಣಪತ್ರವನ್ನು ಬ್ಯಾಂಕ್ಗೆ ಸಲ್ಲಿಸಬೇಕು.
ಅರ್ಜಿಪತ್ರ ಸಂಗ್ರಹ:
ನಂತರ, ನಾಮಿನಿಯವರು ಈಡಾಗಿರುವ ಬ್ಯಾಂಕ್, ವಿಮಾ ಕಂಪನಿಯ ಶಾಖೆಗಳು, ಆಸ್ಪತ್ರೆಗಳು ಅಥವಾ ವಿಮಾ ಏಜೆಂಟ್ಗಳು ಹಾಗೂ ಅಧಿಕೃತ ವೆಬ್ಸೈಟ್ಗಳಿಂದ ವಿಮೆ ಕ್ಲೈಮ್ ಅರ್ಜಿ ಮತ್ತು ಡಿಸ್ಚಾರ್ಜ್ ರಶೀದಿ ಪಡೆದುಕೊಳ್ಳಬೇಕು.
ಅರ್ಜಿಯ ಸಲ್ಲಿಕೆ:
ಕ್ಲೈಮ್ ಅರ್ಜಿ, ಡಿಸ್ಚಾರ್ಜ್ ರಶೀದಿ, ಮರಣ ಪ್ರಮಾಣಪತ್ರ ಹಾಗೂ ನಾಮಿನಿಯ ಬ್ಯಾಂಕ್ ಖಾತೆಯ ವಿವರಗಳು (ಅಥವಾ ರದ್ದಾದ ಚೆಕ್ನ ಪ್ರತಿಯೊಂದು) ಒಟ್ಟಾಗಿ ಅರ್ಜಿ ಸಹಿತವಾಗಿ ಸಲ್ಲಿಸಬೇಕು.
ವಿಮಾ ಕಂಪನಿಯ ನಿರ್ಧಾರ:
ಸಂಬಂಧಿತ ವಿಮಾ ಕಂಪನಿಯ ಗೊತ್ತುಪಡಿಸಿದ ಕಚೇರಿಯು ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕ್ಲೈಮ್ ಇತ್ಯರ್ಥಪಡಿಸುತ್ತದೆ.
ಈ ಪ್ರಕ್ರಿಯೆ ಸರಿಯಾಗಿ ಅನುಸರಿಸಿದರೆ, ನಾಮಿನಿಯು ಮರಣದ ವಿಮಾ ಮೊತ್ತವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಪ್ರೀಮಿಯಂ ಪಾವತಿ ಅವಧಿ
ಈ ಯೋಜನೆಗೆ ನೋಂದಣಿಯಾದ ತಿಂಗಳ ಆಧಾರದ ಮೇಲೆ ಪಾವತಿಸಬೇಕಾದ ಪ್ರೀಮಿಯಂ ಬದಲಾಗುತ್ತದೆ. ಇದು ಪ್ರೊರೇಟಾ (pro-rata) ಆಧಾರದ ಮೇಲೆ ನಿರ್ಧರಿಸಲ್ಪಟ್ಟಿರುತ್ತದೆ. ವಿವರ
ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ನೋಂದಣಿ ಮಾಡಿದರೆ ರೂ. 436 (ಪೂರ್ಣ ವರ್ಷಕ್ಕೆ)
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ನೋಂದಣಿ ಮಾಡಿದರೆ ರೂ. 342
ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ನೋಂದಣಿ ಮಾಡಿದರೆ ರೂ. 228
ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನೋಂದಣಿ ಮಾಡಿದರೆ ರೂ. 114
ಈ ಪ್ರೀಮಿಯಂ ಯೋಜನೆಯ ಉಳಿದ ಅವಧಿಗೆ ಅನುಪಾತದಲ್ಲಿ ಲೆಕ್ಕಹಾಕಲ್ಪಟ್ಟದ್ದಾಗಿದ್ದು, ಪ್ರತಿ ವರ್ಷದ ಮೇ 31ಕ್ಕೆ ಯೋಜನೆಯ ಅವಧಿ ಕೊನೆಗೊಳ್ಳುತ್ತದೆ. ಮುಂದಿನ ವರ್ಷಕ್ಕಾಗಿ ಪ್ರೀಮಿಯಂ ನವೀಕರಣ ಅಗತ್ಯವಿರುತ್ತದೆ.
