ಅಮೆರಿಕಕ್ಕೆ ಅಂಚೆ ಪಾರ್ಸೆಲ್ ಸೇವೆ ಸ್ಥಗಿತ: ಬೆಂಗಳೂರಿಗರಿಗೆ ತಟ್ಟಿದ ತೊಂದರೆ

ಬೆಂಗಳೂರು: ಅಮೆರಿಕದಲ್ಲಿರುವ ಸಂಬಂಧಿಕರಿಗೆ ಭಾರತೀಯರು ಉಪ್ಪಿನಕಾಯಿ, ಮನೆಯಲ್ಲಿ ಮಾಡಿದ ತಿಂಡಿಗಳು, ದೇಸೀ ಬಟ್ಟೆಗಳು, ಕೆಲವೊಮ್ಮೆ ಔಷಧಗಳನ್ನು ಕಳಿಸುವಂಥ ಪದ್ಧತಿಗೆ ಈಗ ಬ್ರೇಕ್ ಬಿದ್ದಿದೆ. ಭಾರತೀಯ ಅಂಚೆ ಇಲಾಖೆ, ಅಮೆರಿಕಕ್ಕೆ ನೀಡುತ್ತಿದ್ದ ಪಾರ್ಸೆಲ್ ಸೇವೆಯನ್ನು ರದ್ದುಗೊಳಿಸಿದೆ. ಇದು ಬೆಂಗಳೂರಿಗೂ ಎಫೆಕ್ಟ್ ಆಗಿದ್ದು, ವಿಧಾನಸೌಧದ ಬಳಿಯಿರುವ ಭಾರತೀಯ ಅಂಚೆ ಇಲಾಖೆಯ ಮುಖ್ಯ ಕಚೇರಿಯಲ್ಲಿ ರಿಜೆಕ್ಟ್ ಆಗಿರುವ ಪಾರ್ಸೆಲ್ ಗಳ ಸಂಖ್ಯೆಯು ಅಧಿಕವಾಗುತ್ತಿದೆ.

ಸಾಮಾನ್ಯವಾಗಿ, ಅಮೆರಿಕದಲ್ಲಿರುವವರು ಭಾರತದಿಂದ ಉಪ್ಪಿನಕಾಯಿ, ಚಟ್ನಿಪುಡಿ, ಮನೆಯಲ್ಲಿ ಮಾಡಿದ ಸಿಹಿತಿಂಡಿಗಳನ್ನು ತರಿಸಿಕೊಳ್ಳುವುದು ವಾಡಿಕೆ. ಅಲ್ಲಿ ದುಬಾರಿ ಎನಿಸುವಂಥ ಕೆಲವು ಔಷಧಿಗಳನ್ನು ಅವರು ಇಲ್ಲಿಂದಲೇ ತರಿಸಿಕೊಳ್ಳುತ್ತಾರೆ. ಇವಿಷ್ಟೇ ಅಲ್ಲದೆ, ಕೆಲವೊಮ್ಮೆ ಯಾವುದಾದರೂ ವಿಳಾಸ ದೃಢೀಕರಣ ಪತ್ರವಿರುವ ಡಾಕ್ಯುಮೆಂಟ್ಸ್, ಹುಟ್ಟುಹಬ್ಬಕ್ಕೆ ಕಳಿಸಲಾಗುವ ಗಿಫ್ಟ್ ಗಳು, ಪುಸ್ತಕಗಳು… ಹೀಗೆ ನಾನಾ ರೀತಿಯ ವಸ್ತುಗಳು ಬೆಂಗಳೂರಿಗರು ಅಮೆರಿಕದಲ್ಲಿರುವ ತಮ್ಮ ಆತ್ಮೀಯರಿಗೆ ಕಳಿಸುತ್ತಿದುದುಂಟು. ಈಗ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಟ್ರಂಪ್ ಅವರು ಭಾರತದ ವಿರುದ್ಧ ಶೇ. 50ರಷ್ಟು ದುಬಾರಿ ತೆರಿಗೆ ವಿಧಿಸಿರುವುದರಿಂದ ಕೇಂದ್ರ ಸರ್ಕಾರ, ಭಾರತೀತ ಅಂಚೆ ಇಲಾಖೆಯಿಂದ ಅಮೆರಿಕಕ್ಕೆ ಹೋಗುವ ಎಲ್ಲಾ ಪಾರ್ಸೆಲ್ ಸೇವೆಗಳನ್ನು ಬಂದ್ ಮಾಡಿದೆ. ಹಾಗಾಗಿ, ಖಾಸಗಿ ಕೊರಿಯರ್ ಸೇವೆಗಳ ಮೂಲಕ ಸಾರ್ವಜನಿಕರು ಅಮೆರಿಕದಲ್ಲಿರುವ ತಮ್ಮ ಆತ್ಮೀಯರಿಗೆ ವಸ್ತುಗಳನ್ನು ಕಳಿಸಬೇಕಾದ ಪರಿಸ್ಥಿತಿಯಿದೆ.
ಆದರೆ, ಖಾಸಗಿ ಕೊರಿಯರ್ ಸೇವೆಗಳ ಮೂಲಕ ವಸ್ತುಗಳನ್ನು ಅಮೆರಿಕದಲ್ಲಿರುವವರಿಗೆ ಕಳಿಸುವುದು ದುಬಾರಿ. ತೂಕಕ್ಕೆ ತಕ್ಕಂತೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ಅಮೆರಿಕದಲ್ಲಿರುವವರಿಗೆ ತಿಂಗಳುಗಳವರೆಗೆ ಸಾಕಾಗುವಷ್ಟು ಉಪ್ಪಿನಕಾಯಿಯಾಗಲೀ, ತಿಂಡಿಗಳಾಗಲೀ, ಔಷಧಗಳನ್ನಾಗಲೀ ಕಳಿಸುವಾಗ ಅದರ ತೂಕಕ್ಕೆ ಅನುಗುಣವಾಗಿ 5 ಸಾವಿರ ರೂ.ಗಳಿಂದ 7 ಸಾವಿರ ರೂ.ಗಳವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಹಾಗಾಗಿ, ಇಲ್ಲಿಯವರು ತಮ್ಮ ಆತ್ಮೀಯರಿಗೆ ಸಾಮಗ್ರಿಗಳನ್ನು ಕಳಿಸುವುದಕ್ಕೆ ಹಿಂದುಮುಂದು ನೋಡುವಂತಾಗಿದೆ. ತೀರಾ ಅನಿವಾರ್ಯ ಇರುವಂಥವನ್ನು ಮಾತ್ರ ಕಳಿಸುವಂತಾಗಿದೆ.