ಮೀನುಗಾರಿಕೆಯಲ್ಲಿ ದೇಶವ್ಯಾಪಿ ಏಕರೂಪ ನಿಯಮ ಜಾರಿಯ ಸಾಧ್ಯತೆ

ಮಂಗಳೂರು: ಮಳೆಗಾಲ (rain) ಬಂತಂದರೆ ಸಾಕು ರಾಜ್ಯ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ (fishing) ನಿಷೇಧವಿರುತ್ತೆ. ಇದೇ ಸಂದರ್ಭದಲ್ಲಿ ಮೀನುಗಳು ಸಂತಾನೋತ್ಪತ್ತಿ ನಡೆಸುವುದರಿಂದ ಈ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಇಡೀ ದೇಶದಲ್ಲಿ ಏಕರೂಪದ ರಜಾ ನಿಯಮ ಜಾರಿಯಾಗದೆ ಇರುವುದರಿಂದ ಈ ನಿಯಮ ಮಾಡಿಯೂ ಪ್ರಯೋಜನ ಇಲ್ಲದಂತಾಗಿದೆ. ಹೀಗಾಗಿ ಇಡೀ ದೇಶದಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಯಮ ಜಾರಿಗೆ ಕೇಂದ್ರ ಚಿಂತನೆ ನಡೆಸಿದ್ದು, ಇದರ ಜೊತೆ ನಿಷೇಧದ ಅವಧಿಯೂ ವಿಸ್ತರಣೆಯಾಗುವ ಸಾಧ್ಯತೆಯಿದೆ.

ದೇಶದಲ್ಲಿ ಏಕರೂಪದ ನಿಷೇಧದ ಅವಧಿ ಜಾರಿಗೆ ಚಿಂತನೆ
ಹೌದು.. ಕರಾವಳಿ ರಾಜ್ಯಗಳ ಪ್ರಮುಖ ಆದಾಯದ ಮೂಲ ಮೀನುಗಾರಿಕೆ. ಸಮುದ್ರದ ಮತ್ಸ್ಯ ಸಂಪತ್ತನಿಂದ ವಾರ್ಷಿಕವಾಗಿ ಕೋಟಿ ಕೋಟಿ ರೂ ಆದಾಯ ಬರುತ್ತಿದೆ. ಆದರೆ ಅತಿಯಾಸೆಗೆ ಬಿದ್ದಿರುವ ಮಾನವ, ಸಣ್ಣಪುಟ್ಟ ಮೀನುಗಳನ್ನು ಬಲೆಗೆ ಕೆಡವಿ ಮತ್ಸ್ಯ ಸಂಪತ್ತಿನ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಇದಕ್ಕಾಗಿಯೇ ಮೀನುಗಳು ಸಂತಾನೋತ್ಪತ್ತಿ ನಡೆಸುವ ಕಾಲದಲ್ಲಿ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ನಿಯಮವನ್ನು ಜಾರಿಗೊಳಿಸಲಾಗಿದೆ. ಆದರೆ ಇಡೀ ದೇಶದಲ್ಲಿ ಏಕಕಾಲದಲ್ಲಿ ಮೀನುಗಾರಿಕೆ ನಿಷೇಧದ ಅವಧಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪಣೆ ಮತ್ತು ಹೈನುಗಾರಿಕೆ ಸಚಿವಾಲಯವು ದೇಶದಲ್ಲಿ ಏಕರೂಪದ ನಿಷೇಧದ ಅವಧಿ ಜಾರಿಗೆ ಚಿಂತನೆ ನಡೆಸುತ್ತಿದೆ. ಇದಕ್ಕಾಗಿಯೇ ತಾಂತ್ರಿಕ ಸಮಿತಿಯೊಂದನ್ನು ರಚಿಸಿದ್ದು, ಮೀನುಗಾರರಲ್ಲಿ ಆಶಾಭಾವವನ್ನು ಮೂಡಿಸಿದೆ.
ಕಡಲಲ್ಲಿ ಮತ್ಸ್ಯ ಸಂಪತ್ತು ಬರಿದಾಗಿದೆ ಎಂಬ ಆತಂಕ ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಹೀಗಾಗಿ ಮೀನು ಸಂತಾನೋತ್ಪತ್ತಿ ಕಾಲದಲ್ಲಿ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿಯದಿದ್ದರೆ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗಲಿದೆ ಎಂಬುದು ಲೆಕ್ಕಚಾರ.
ಸದ್ಯ ಕರ್ನಾಟಕ ಕರಾವಳಿಯಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ಅಂದರೆ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ನಿಷೇಧದ ಅವಧಿ ಜಾರಿಯಲ್ಲಿದೆ. ಆದರೆ ಪಶ್ಚಿಮ ಕರಾವಳಿಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್, ತಮಿಳುನಾಡಿನಲ್ಲಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ವ್ಯತ್ಯಾಸವಿದೆ. ಹೀಗಾಗಿ ಏಕರೂಪದ ನಿಯಮ ಜಾರಿ ಜೊತೆಗೆ ಎರಡು ತಿಂಗಳಿನಿಂದ ಮೂರು ತಿಂಗಳವರೆಗೆ ನಿಷೇಧದ ಅವಧಿ ವಿಸ್ತರಿಸುವ ಚಿಂತನೆ ನಡೆಸಲಾಗುತ್ತಿದೆ.
ಜೂನ್, ಜುಲೈ, ಆಗಸ್ಟ್ ವೇಳೆಗೆ ಮೀನುಗಳು ಸಂತಾನೋತ್ಪತ್ತಿಯ ಸಮಯ. ಇಂತಹ ಸಂದರ್ಭದಲ್ಲಿ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿದರೆ ಸಣ್ಣ ಮೀನುಗಳು ಬಲೆಗೆ ಬಿದ್ದು, ಭವಿಷ್ಯದಲ್ಲಿ ಮತ್ಸ್ಯ ಸಂಕುಲಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ದೇಶದಲ್ಲಿ ಏಕರೂಪದ ನಿಯಮ ಜಾರಿಯನ್ನು ಶೀಘ್ರ ಮಾಡಬೇಕಾಗಿದೆ.
