ಪೋರ್ಷೆ ಕಾರು ಅಪಘಾತ: 2 ಜನರ ಸಾವುಗೆ ಕಾರಣನಾದ 17 ವರ್ಷದ ಬಾಲಕನಿಗೆ ಬಾಲಪರಾಧಿ ಟ್ಯಾಗ್

ಪುಣೆ: ಕಳೆದ ವರ್ಷ ಪುಣೆಯಲ್ಲಿ ಕುಡಿದ ಮತ್ತಿನಲ್ಲಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣನಾದ 17 ವರ್ಷದ ಬಾಲಕನನ್ನು ಬಾಲಾಪರಾಧಿ ಎಂದು ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಬಾಲ ನ್ಯಾಯ ಮಂಡಳಿ ತಿಳಿಸಿದೆ.

ಈ ಘಟನೆ ಕಳೆದ ವರ್ಷ ಮೇ 19ರಂದು ಕಲ್ಯಾಣಿ ನಗರ ಪ್ರದೇಶದಲ್ಲಿ ನಡೆದಿತ್ತು. ಈ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಐಟಿ ಕಂಪನಿಯ ಉದ್ಯೋಗಿಗಳಾಗಿದ್ದ ಅನೀಶ್ ಅವಧಿಯಾ ಮತ್ತು ಅವರ ಸ್ನೇಹಿತೆ ಅಶ್ವಿನಿ ಕೋಸ್ಟಾ ಮೃತಪಟ್ಟಿದ್ದರು.
ಕಳೆದ ವರ್ಷ ಪುಣೆ ಪೊಲೀಸರು ಆರೋಪಿಯನ್ನು ವಯಸ್ಕ ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಕೋರಿದ್ದರು. ಅಪಘಾತ ಮಾಡಿ ಇಬ್ಬರನ್ನು ಕೊಂದಿದ್ದಲ್ಲದೇ ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದರು.
ಮಂಗಳವಾರ, ಬಾಲ ನ್ಯಾಯ ಮಂಡಳಿಯು ಆರೋಪಿ ಬಾಲಕನನ್ನು ವಯಸ್ಕ ಎಂದು ಪರಿಗಣಿಸಬೇಕೆಂಬ ಪೊಲೀಸರ ಮನವಿಯನ್ನು ತಿರಸ್ಕರಿಸಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗೆ ಜಾಮೀನು ಸಿಕ್ಕಿತ್ತು.
ಜೂ.25, 2024ರಂದು, ಬಾಂಬೆ ಹೈಕೋರ್ಟ್ ಬಾಲಕನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಬಾಲ ನ್ಯಾಯ ಮಂಡಳಿಯು ಅಪ್ರಾಪ್ತ ಆರೋಪಿಯನ್ನು ವೀಕ್ಷಣಾ ಗೃಹಕ್ಕೆ ಕಳುಹಿಸುವುದು ಕಾನೂನುಬಾಹಿರವಾಗಿದೆ ಎಂದು ಹೇಳಿತ್ತು.