ಜನಪ್ರಿಯ ವಿಸ್ಕಿ ಬ್ರ್ಯಾಂಡ್ ‘ಇಂಪೀರಿಯಲ್ ಬ್ಲೂ’ ಮಾರಾಟಕ್ಕೆ: ₹4,000 ಕೋಟಿಗೆ ತಿಲಕ್‌ನಗರ ಇಂಡಸ್ಟ್ರೀಸ್ ಪಾಲಾಗುವ ಸಾಧ್ಯತೆ!

ನವದೆಹಲಿ : ತನ್ನ ಮೆನ್ ವಿಲ್ ಬಿ ಮೆನ್ ಜಾಹೀರಾತಿನ ಮೂಲಕ ಯುವ ಜನತೆಯ ಗಮನಸೆಳೆದಿದ್ದ ಜನಪ್ರಿಯ ವಿಸ್ಕಿ ಬ್ರ್ಯಾಂಡ್ Imperial Blue ಮಾರಾಟಕ್ಕೆ ಸಜ್ಜಾಗಿದೆ. ಇಲ್ಲಿಯವರೆಗೂ ಇಂಪೀರಿಯಲ್ ಬ್ಲ್ಯೂ ವಿಸ್ಕಿ ಮಾಲೀಕತ್ವದ ಹೊಂದಿದ್ದ ಪೆರ್ನಾಡ್ ರಿಕಾರ್ಡ್ ಕೊನೆಗೂ ಜನಪ್ರಿಯ ವಿಸ್ಕಿಯನ್ನು ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿಗೆ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ.

ಮೂಲಗಳ ಪ್ರಕಾರ ತಿಲಕ್‌ನಗರ ಇಂಡಸ್ಟ್ರೀಸ್ ತೆಕ್ಕೆಗೆ ಇಂಪೀರಿಯಲ್ ಬ್ಲ್ಯೂ ವಿಸ್ಕಿಯ ಮಾಲೀಕತ್ವ ಬರುವ ಸಾಧ್ಯತೆ ಇದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
ಸಂಭಾವ್ಯ ಸ್ವಾಧೀನಕ್ಕೆ ಸಾಲ ಮತ್ತು ಇಕ್ವಿಟಿಯ ಸಂಯೋಜನೆಯ ಮೂಲಕ ಹಣಕಾಸು ಒದಗಿಸುವ ನಿರೀಕ್ಷೆಯಿದೆ. ತಿಲಕ್‌ನಗರ ಇಂಡಸ್ಟ್ರೀಸ್‌ನ ಮಂಡಳಿಯು ಜುಲೈ 23 ರಂದು ನಿಧಿಸಂಗ್ರಹಣೆ ಪ್ರಸ್ತಾವನೆಯನ್ನು ಪರಿಗಣಿಸಲು ಸಭೆ ಸೇರಲಿದೆ. 2025 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಕಂಪನಿಯು ಸುಮಾರು ₹107 ಕೋಟಿ ನಗದು ಮೀಸಲು ಹೊಂದಿತ್ತು. ತಿಲಕ್‌ನಗರ ಇಂಡಸ್ಟ್ರೀಸ್ ಮತ್ತು ಪೆರ್ನೋಡ್ ರಿಕಾರ್ಡ್ ಎರಡೂ ಕಂಪನಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಿಲಕ್‌ನಗರ ಇಂಡಸ್ಟ್ರೀಸ್‌ನ ಷೇರುಗಳು ಮಂಗಳವಾರ 8% ರಷ್ಟು ಏರಿಕೆಯಾಗಿ ₹453 ರ ಗರಿಷ್ಠ ಮಟ್ಟವನ್ನು ತಲುಪಿವೆ. ಕಳೆದ ಐದು ವಹಿವಾಟು ಅವಧಿಗಳಲ್ಲಿ ಷೇರುಗಳು 20% ಕ್ಕಿಂತ ಹೆಚ್ಚು ಗಳಿಸಿವೆ.
ಇಂಪೀರಿಯಲ್ ಬ್ಲೂ ಜನಪ್ರಿಯ ಭಾರತೀಯ ವಿಸ್ಕಿಯಾಗಿದ್ದು, ಅದರ ಮೃದುತ್ವ ಮತ್ತು ಕಡಿಮೆ ಬೆಲೆಯ ಕಾರಣದಿಂದ ಹೆಸರುವಾಸಿಯಾಗಿದೆ. ಇದು ಭಾರತೀಯ ಧಾನ್ಯ ಸ್ಪಿರಿಟ್‌ಗಳು ಮತ್ತು ಆಮದು ಮಾಡಿಕೊಂಡ ಸ್ಕಾಚ್ ಮಾಲ್ಟ್‌ಗಳ ಮಿಶ್ರಣವಾಗಿದ್ದು, 1997 ರಲ್ಲಿ ಬಿಡುಗಡೆಯಾಯಿತು. ಇದು ಪ್ರಸ್ತುತ ಪೆರ್ನಾಡ್ ರಿಕಾರ್ಡ್ ಒಡೆತನದಲ್ಲಿದೆ ಮತ್ತುಅವರ ಅತಿದೊಡ್ಡ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.
ಇಂಪೀರಿಯಲ್ ಬ್ಲೂ ಪೆರ್ನಾಡ್ ರಿಕಾರ್ಡ್‌ನ ಪೋರ್ಟ್‌ಫೋಲಿಯೊದ ಪ್ರಮುಖ ಭಾಗವಾಗಿದೆ ಮತ್ತು 2002 ರಲ್ಲಿ ಅವರು ಅದನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಇದು 750 ಮಿಲಿ, 375 ಮಿಲಿ, 180 ಮಿಲಿ ಮತ್ತು 90 ಮಿಲಿ ಬಾಟಲಿಗಳಲ್ಲಿ ಲಭ್ಯವಿದೆ.
1997ರಲ್ಲಿಸೀಗ್ರಾಮ್ ಮೊದಲ ಬಾರಿಗೆ ಇಂಪಿರಿಯಲ್ ಬ್ಲ್ಯೂಅನ್ನು ಮಾರುಕಟ್ಟೆಗೆ ಪರಿಚಯ ಮಾಡಿತು. 2001ರ ಡಿಸೆಂಬರ್ ವೇಳೆ ಪೆರ್ನಾಡ್ ರಿಕಾರ್ಡ್ ಹಾಗೂ ಡಿಯಾಜಿಯೋ ಸೀಗ್ರಾಮ್‌ನ ಜಾಗತಿಕ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡಿತ್ತು. 2002ರ ವೇಳೆ ಪೆರ್ನಾಡ್ ರಿಕಾರ್ಡ್, ಸೀಗ್ರಾಮ್‌ನ ಭಾರತೀಯ ವ್ಯವಹಾರವನ್ನು ತನ್ನದಾಗಿಸಿಕೊಂಡಿತ್ತು.
ಪೆರ್ನೋಡ್ ರಿಕಾರ್ಡ್ ಈ ಹಿಂದೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಾಟ್ಲಿಂಗ್ ಸೌಲಭ್ಯ ಹೊಂದಿರುವ ಯುನೈಟೆಡ್ ಏಜೆನ್ಸಿ ಲಿಮಿಟೆಡ್ (UAL) ನಲ್ಲಿ 74% ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.
UAL ಅನ್ನು ಸೀಗ್ರಾಮ್‌ನ ಭಾರತೀಯ ವ್ಯವಹಾರದೊಂದಿಗೆ ವಿಲೀನಗೊಳಿಸಲಾಯಿತು ಮತ್ತು ಸೀಗ್ರಾಮ್ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿತು. ದೇಶದಲ್ಲಿನ ದೊಡ್ಡ ಕಾರ್ಯಾಚರಣೆಗಳಿಂದಾಗಿ UAL ಅನ್ನು ಸೀಗ್ರಾಮ್‌ಗೆ ಸಂಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈಗ ಪೆರ್ನಾಡ್ ರಿಕಾರ್ಡ್ ತನ್ನ ಅತಿದೊಡ್ಡ ಬ್ರ್ಯಾಂಡ್‌ಅನ್ನು ಬೇರೆ ಕಂಪನಿಗೆ ವರ್ಗಾಯಿಸಲು ತೀರ್ಮಾನ ಮಾಡಿದೆ.
