ಸಾವಿರ ಕೋಟಿ ಬೆಲೆ ಬಾಳುವ 9 ಮಹಡಿಗಳ ಆಫೀಸ್ ಬಾಡಿಗೆ ಪಡೆದ ಜನಪ್ರಿಯ ಕಂಪನಿ

ಬೆಂಗಳೂರು: ಆಯಪಲ್ ಕಂಪನಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ. ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ (Embassy Zenith) ಎನ್ನುವ ಕಟ್ಟಡದಲ್ಲಿ ಒಂಬತ್ತು ಅಂತಸ್ತುಗಳನ್ನು ಆಯಪಲ್ ಕಂಪನಿ ಬಾಡಿಗೆಗೆ (Rent) ಪಡೆದಿದೆ.

10 ವರ್ಷ ಕಾಲ ಬಾಡಿಗೆ ಕರಾರು ಆಗಿದೆ. ಈ 9 ಅಂತಸ್ತುಗಳಿಂದ ಸೇರಿ ಒಟ್ಟು 2.7 ಲಕ್ಷ ಚದರಡಿ ಜಾಗವನ್ನು ಆಯಪಲ್ (Apple) ಬಳಸಿಕೊಳ್ಳಲಿದೆ. ವರದಿಗಳ ಪ್ರಕಾರ ಜೆನಿತ್ ಎಂಬಸಿ ಕಟ್ಟಡದಲ್ಲಿ 5ರಿಂದ 13ನೇ ಮಹಡಿವರೆಗೂ ಸ್ಥಳವನ್ನು ಆಯಪಲ್ ಬಳಸುತ್ತದೆ.
ಈ 9 ಫ್ಲೋರ್ಗಳಿಗೆ ಆಯಪಲ್ ಕಂಪನಿ ಮಾಸಿಕವಾಗಿ 6.315 ಕೋಟಿ ರೂ ಬಾಡಿಗೆ ನೀಡುತ್ತದೆ. ಪ್ರತೀ ಚದರಡಿಗೆ 235 ರೂ ಬಾಡಿಗೆ ಆದಂತಾಗುತ್ತದೆ. ಕರಾರು ಪ್ರಕಾರ ಈ ಕಟ್ಟಡಕ್ಕೆ ಬಾಡಿಗೆ ವರ್ಷಕ್ಕೆ ಶೇ. 4.5ರಷ್ಟು ಹೆಚ್ಚಳ ಮಾಡಲಾಗುತ್ತದೆ.
ಅಡ್ವಾನ್ಸ್ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಆಗಿ ಆಯಪಲ್ ಕಂಪನಿ 31.57 ಕೋಟಿ ರೂ ನೀಡಿದೆ. ಹತ್ತು ವರ್ಷ ಕಾಲ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮಾಸಿಕ ಬಾಡಿಗೆ ಹಾಗೂ ವಾರ್ಷಿಕವಾಗಿ ಹೆಚ್ಚಿಸಲಾಗುವ ಬಾಡಿಗೆ ಮೊತ್ತ, ಇವೆಲ್ಲವನ್ನೂ ಸೇರಿಸಿದರೆ 10 ವರ್ಷದಲ್ಲಿ ಒಟ್ಟು ವೆಚ್ಚ 1,010 ಕೋಟಿ ರೂ ಆಗುತ್ತದೆ. ಇದರಲ್ಲಿ ಕಟ್ಟಡಕ್ಕೆ ಬಾಡಿಗೆ ಮಾತ್ರವಲ್ಲ, ಕಾರ್ ಪಾರ್ಕ್, ಮೈಂಟೆನೆನ್ಸ್ ಫೀಗಳೂ ಒಳಗೊಂಡಿವೆ. ಈ ಕಟ್ಟಡದಲ್ಲಿ 1,200 ಮಂದಿ ಕೆಲಸ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ದಾಖಲಾಗಿರುವ ಅತಿದೊಡ್ಡ ಬಾಡಿಗೆ ಕರಾರು ಒಪ್ಪಂದಗಳಲ್ಲಿ ಇದೂ ಒಂದೆನಿಸಿದೆ. ಎಂಬಸಿ ಗ್ರೂಪ್ಗೆ ಸೇರಿದ ಮ್ಯಾಕ್ಚಾರ್ಲ್ಸ್ ಇಂಡಿಯಾ ಲಿಮಿಟೆಡ್ ಎನ್ನುವ ಕಂಪನಿಯು ಎಂಬಸಿ ಜೆನಿತ್ನ ಮಾಲೀಕ ಸಂಸ್ಥೆಯಾಗಿದೆ. ಇದೇ ಎಂಬಸಿ ಕಟ್ಟಡದಲ್ಲಿ ಕೆಳಗಿನ ಮಹಡಿಯಿಂದ ನಾಲ್ಕನೇ ಮಹಡಿವರೆಗಿನ ಜಾಗವನ್ನೂ ಆಯಪಲ್ ಬಾಡಿಗೆಗೆ ಪಡೆಯುವ ಆಲೋಚನೆಯಲ್ಲಿದೆ. ಈ ನಾಲ್ಕು ಮಹಡಿಗಳಲ್ಲಿ ಒಟ್ಟು 1,21,203 ಚದರಡಿ ವಿಸ್ತೀರ್ಣದ ಆಫೀಸ್ ಸ್ಪೇಸ್ ಇದೆ. ಈ ಎಲ್ಲಾ 13 ಮಹಡಿಗಳಿಂದ ಒಟ್ಟು ಆಫೀಸ್ ಸ್ಪೀಸ್ ವಿಸ್ತೀರ್ಣ 4 ಲಕ್ಷ ಚದರಡಿ ದಾಟುತ್ತದೆ.
ಬೆಂಗಳೂರಿನಲ್ಲಿ ಹೆಚ್ಚಿನ ಆಯಪಲ್ ಉಪಸ್ಥಿತಿ
ಬೆಂಗಳೂರಿನ ಕಬ್ಬನ್ ರೋಡ್ನಲ್ಲಿರುವ ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್ನಲ್ಲಿ ಆಯಪಲ್ ಕಂಪನಿ 1.16 ಲಕ್ಷ ಚದರಡಿ ವಿಸ್ತೀರ್ಣದ ಜಾಗವನ್ನು 2.43 ಕೋಟಿ ರೂ ಮಾಸಿಕ ಬಾಡಿಗೆಗೆ ಪಡೆದಿದೆ. ಬ್ಯಾಟರಾಯನಪುರದಲ್ಲಿ 8,000 ಚದರಡಿ ವಿಸ್ತೀರ್ಣದ ಜಾಗವೊಂದನ್ನೂ ಆಯಪಲ್ ಲೀಸ್ಗೆ ಪಡೆದಿದೆ.
ದೆಹಲಿ ಮತ್ತು ಮುಂಬೈನಲ್ಲಿ ರೀಟೇಲ್ ಸ್ಟೋರ್ಗಳನ್ನು ಹೊಂದಿರುವ ಆಯಪಲ್ ಕಂಪನಿ ಬೆಂಗಳೂರು ಹಾಗೂ ಪುಣೆ ನಗರಗಳಲ್ಲಿ ಮತ್ತೂ ನಾಲ್ಕು ರೀಟೆಲ್ ಸ್ಟೋರ್ಗಳನ್ನು ಆರಂಭಿಸುವ ಪ್ಲಾನ್ ಹೊಂದಿದೆ.