Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಎಎಸ್‌ ಹುದ್ದೆಯಿಂದ ವಜಾಗೊಂಡಿದ್ದ ಪೂಜಾ ಖೇಡ್ಕರ್‌ ಮತ್ತೊಂದು ಸಂಕಷ್ಟದಲ್ಲಿ: ಅಪಹರಣ ಆರೋಪ

Spread the love

ಲೋಕಸೇವಾ ಪರೀಕ್ಷೆಯ ನೇಮಕಾತಿ ವೇಳೆ ಅಕ್ರಮವೆಸಗಿರುವುದು ಹಾಗೂ ವಿಶೇಷಚೇತನರಿಗಿರುವ ಹಾಗೂ ಹಿಂದುಳಿದ ವರ್ಗಗಳ ಹಲವು ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದು ಸಾಬೀತಾದ ನಂತರ ಕಳೆದ ವರ್ಷ ಐಎಎಸ್ ಹುದ್ದೆಯಿಂದ ವಜಾಗೊಂಡಿರುವ ಮಾಜಿ ಅಧಿಕಾರಿ ಪೂಜಾ ಖೇಡ್ಕರ್ ಈಗ ಮತ್ತೊಂದು ಪ್ರಕರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕನ ಅಪಹರಿಸಿದ ಆರೋಪವನ್ನು ಈಗ ಪೂಜಾ ಕುಟುಂಬ ಎದುರಿಸುತ್ತಿದ್ದು, ಪೂಜಾ ಅವರ ಪುಣೆಯಲ್ಲಿರುವ ಮನೆಯಿಂದಲೇ ಟ್ರಕ್ ಚಾಲಕನನ್ನು ಕೊನೆಗೂ ಪೊಲೀಸರು ರಕ್ಷಿಸಲಾಗಿದೆ.

ಕಾರಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕನ ಅಪಹರಣ

ತಮ್ಮ ಕಾರಿಗೆ ಡಿಕ್ಕಿ ಹೊಡೆದ ನಂತರ ಟ್ರಕ್ ಚಾಲಕನನ್ನು ಕಾರಿನಲ್ಲಿ ತುಂಬಿಸಿ ಅಪಹರಣ ಮಾಡಲಾಗಿತ್ತು. ಈ ಕಾರು ಪುಣೆಯ ಚತುಶ್ರಿಂಗಿ ಪ್ರದೇಶದಲ್ಲಿರುವ ಪೂಜಾ ಮನೆಯಲ್ಲಿ ಪತ್ತೆಯಾದ ನಂತರ ಪೊಲೀಸರು ಪೂಜಾ ಮನೆಗೆ ದಾಳಿ ನಡೆಸಿ ಈ ಟ್ರಕ್ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಕಾರಿನೊಂದಿಗೆ ಅಪಘಾತ ಆದ ನಂತರ ಟ್ರಕ್ ಚಾಲಕ ನಾಪತ್ತೆಯಾಗಿದ್ದ. ಕಾಂಕ್ರೀಟ್ ಮಿಕ್ಸರ್ ಟ್ರಕ್ ಹಾಗೂ ಕಾರಿನ ಮಧ್ಯೆ ನವಿ ಮುಂಬೈನ ಐರೋಲಿ ಸಿಗ್ನಲ್ ಬಳಿ ಅಪಘಾತ ನಡೆದಿತ್ತು. ಘಟನೆಯ ನಂತರ ಟ್ರಕ್ ಚಾಲಕ ನಾಪತ್ತೆಯಾಗಿದ್ದ ಎಂದು ಪೊಲೀಸರು ಹೇಳಿದ್ದರು. ಟ್ರಕ್ ಚಾಲಕ ಪ್ರಹ್ಲಾದ್‌ ಕುಮಾರ್ ಅವರು ಈ ಕಾಂಕ್ರೀಟ್ ಮಿಕ್ಸರ್ ಟ್ರಕ್‌ನ್ನು ಚಲಾಯಿಸುತ್ತಿದ್ದಾಗ ಅದು ಎಂಹೆಚ್‌ 12 ಆರ್‌ಟಿ 5000 ನಂಬರ್ ಪ್ಲೇಟಿನ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದಾದ ನಂತರ ಕಾರಿನಲ್ಲಿದ್ದ ಇಬ್ಬರು ಒತ್ತಾಯಪೂರ್ವಕವಾಗಿ ಟ್ರಕ್ ಚಾಲಕ ಪ್ರಹ್ಲಾದ್‌ನನ್ನು ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದರು ಎಂದು ಪೊಲೀಸರು ಹೇಳಿದ್ದರು.

ವಜಾಗೊಂಡಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ಗೆ ಮತ್ತೊಂದು ಸಂಕಷ್ಟ

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈ ಕಾರನ್ನು ಪೂಜಾ ಖೇಡ್ಕರ್ ಅವರ ಪುಣೆಯಲ್ಲಿರುವ ಚತುಶ್ರಿಂಗಿ ಪ್ರದೇಶದಲ್ಲಿ ಇರುವುದನ್ನು ಪತ್ತೆ ಮಾಡಿದ್ದರು. ಹೀಗಾಗಿ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿ ಕಾರು ಚಾಲಕ ಪ್ರಹ್ಲಾದ್‌ ಕುಮಾರ್ ಅವರನ್ನು ರಕ್ಷಿಸಿದ್ದಾರೆ. ಆದರೆ ಈ ವೇಳೆ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಅವರು ಪೊಲೀಸರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸರು ಬಂದಾಗ ಮನೆಯ ಬಾಗಿಲು ತೆಗೆಯದೇ ಹಲವು ನಿಮಿಷಗಳ ಕಾಲ ಅವರನ್ನು ಹೊರಗೆ ಕಾಯಿಸಿದ್ದಾರೆ. ಜೊತೆಗೆ ಅವರೊಂದಿಗೆ ವಾಗ್ವಾದ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ಮನೋರಮ ಖೇಡ್ಕರ್‌ಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಪೂಜಾ ತಾಯಿ ಮನೋರಮಾ ಖೇಡ್ಕರ್ ಅವರ ಅವಾಂತರವೂ ಇದೇ ಮೊದಲಲ್ಲ, ಈ ಹಿಂದೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅವರು ಗನ್‌ ಹಿಡಿದು ಇತರರಿಗೆ ಬೆದರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದು, ಇದೇ ಕಾರಣಕ್ಕೆ ನಂತರ ಆಕೆಯನ್ನು ರಾಯ್‌ಗಡದ ಹಿರಕನಿವಾಡಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದರು.

ನೇಮಕಾತಿ ವೇಳೆ ಅಕ್ರಮ ಪತ್ತೆಯಾದ ಹುದ್ದೆಯಿಂದ ವಜಾಗೊಂಡಿರುವ ಪೂಜಾ ಖೇಡ್ಕರ್:

ಇತ್ತ ಪೂಜಾ ಖೇಡ್ಕರ್ ಅವರು ಲೋಕಸೇವಾ ಆಯೋಗಕ್ಕೆ ನೇಮಕಾತಿ ವೇಳೆ ಹಲವು ಅಕ್ರಮವೆಸಗಿದ್ದಾರೆ ಎಂಬುದು ಸಾಬೀತಾದ ಹಿನ್ನೆಲೆ ಸುಪ್ರಿಂಕೋರ್ಟ್ ಅವರನ್ನು ಜೀವನಪರ್ಯಂತ ಯುಪಿಎಸ್‌ಸಿ ಪರೀಕ್ಷೆ ಬರೆಯದಂತೆ ನಿರ್ಬಂಧ ಹೇರಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಆಕೆಯನ್ನು ಐಎಎಸ್ ಹುದ್ದೆಯಿಂದ ವಜಾ ಮಾಡಲಾಗಿತ್ತು. ಪೂಜಾ ಖೇಡ್ಕರ್ ಅವರು ಹಿಂದುಳಿದ ವರ್ಗಗಳ ಸವಲತ್ತು ಹಾಗೂ ಆರೋಗ್ಯವಾಗಿದ್ದರು ವಿಶೇಷ ಚೇತನರ ಕೋಟಾದ ಮೂಲಕ ಸವಲತ್ತು ಪಡೆದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯನ್ನು ವಜಾ ಮಾಡಲಾಗಿದೆ. ಐಎಎಸ್ ಪ್ರೊಬೇಷನರಿ ಹುದ್ದೆಗೆ ಆಯ್ಕೆ ಆದ ಮೇಲೆ ಅನುಮತಿ ಇಲ್ಲದೇ ಕೆಂಪುಗೂಟಾದ ಕಾರು ಬಳಸಿದ್ದು ಸೇರಿದಂತೆ ಹಲವು ಸವಲತ್ತುಗಳ ದುರುಪಯೋಗಪಡಿಸಿಕೊಂಡ ನಂತರ ಹಿರಿಯ ಅಧಿಕಾರಿಗಳು ಆಕೆಯ ವಿರುದ್ಧ ದೂರು ನೀಡಿದ ನಂತರ ಆಕೆಯ ವಿರುದ್ಧ ತನಿಖೆಗಿಳಿದಾಗ ಆಕೆಯ ಕಿತಾಪತಿಗಳು ಬೆಳಕಿಗೆ ಬಂದಿದ್ದವು.


Spread the love
Share:

administrator

Leave a Reply

Your email address will not be published. Required fields are marked *