ಬಂಗಾಳದಲ್ಲಿ ಕಾಳಿ ವಿಗ್ರಹ ಧ್ವಂಸ ಪ್ರಕರಣದಿಂದ ರಾಜಕೀಯ ಬಿರುಗಾಳಿ: ಮಹಾಕಾಳಿ ಮೂರ್ತಿಯನ್ನೇ ಪೊಲೀಸ್ ವ್ಯಾನ್‌ನಲ್ಲಿ ಸಾಗಿಸಿರುವುದಕ್ಕೆ ಬಿಜೆಪಿ ಆಕ್ರೋಶ

ಕೋಲ್ಕತ್ತಾ: ಸುಂದರ್‌ಬನ್ಸ್ ಬಳಿಯ ಕಾಕ್‌ದ್ವೀಪದಲ್ಲಿ ಕಾಳಿವಿಗ್ರಹ ಧ್ವಂಸಗೊಳಿಸಿದ ಬಳಿಕ ಬಂಗಾಳದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎದ್ದಿದೆ. ಮಹಾಕಾಳಿ ಮೂರ್ತಿಯನ್ನೇ ಪೊಲೀಸರು ಬಂಧಿಸಿ ಪೊಲೀಸ್ ವ್ಯಾನ್‌ನಲ್ಲಿ ಹೊತ್ತೊಯ್ದಿದ್ದಾರೆ. ಈ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಜಟಾಪಟಿ ಏರ್ಪಟ್ಟಿದೆ.

ಕಾಳಿ ಮಾತೆ ಮೂರ್ತಿ ಧ್ವಂಸಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ. ಕಾಳಿ ಮೂರ್ತಿಯನ್ನೇ ಪೊಲೀಸ್ ವ್ಯಾನ್‌ಗೆ ತುಂಬಿ ಕೊಂಡೊಯ್ಯುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿರುವ ಬಿಜೆಪಿ, ಇದಕ್ಕಿಂತ ಅವಮಾನ, ದುಸ್ಥಿತಿ ಇನ್ನೇನಿದೆ ಎಂದು ಪ್ರಶ್ನೆ ಮಾಡಿದೆ.
ಪೊಲೀಸ್ ವ್ಯಾನ್‌ನಲ್ಲಿ ಮಹಾಕಾಳಿ ಮಾತೆ
ಮಮತಾ ಬ್ಯಾನರ್ಜಿ ಅವರ ಸರ್ಕಾರ ಆರೋಪಿಗಳನ್ನು, ವಶಕ್ಕೆ ಪಡೆದವರನ್ನು ಕೊಂಡೊಯ್ಯುವ ಪೊಲೀಸ್ ವಾಹನದಲ್ಲಿ ಕಾಳಿ ಮಾತೆ ವಿಗ್ರಹ ತುಂಬಿಸಿ ಕೊಂಡೊಯ್ದಿದೆ. ಹಿಂದೂಗಳ ನಂಬಿಕೆಗೆ ಘಾಸಿಗೊಳಿಸಿರುವುದು ಅತೀ ದೊಡ್ಡ ಅಪರಾಧ ಎಂದು ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಚಂದಾನಗರ ಗ್ರಾಮದಲ್ಲಿ ದೇವಸ್ಥಾನದ ಕಾಳಿ ಮಾತೆ ಮೂರ್ತಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಕಾಳಿ ಮೂರ್ತಿಯ ತಲೆ, ಕೈ ಕಾಲುಗಳನ್ನು ಧ್ವಂಸಗೊಳಿಸಿದ್ದಾರೆ. ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕಿದ್ದ ಪೊಲೀಸರು ದೇವಸ್ಥಾನದ ಬಾಗಿಲು ಲಾಕ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸರು, ಸರ್ಕಾರ ಹಿಂದೂ ನಂಬಿಕೆಗೆ ಮಾತ್ರ ಘಾಸಿ ಮಾಡಿಲ್ಲ, ಅವರು ಬಂಗಾಳದ ಆತ್ಮವನ್ನೇ ಘಾಸಿಗೊಳಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕಿಡಿ ಕಾರಿದ್ದಾರೆ.
ಬಿಜೆಪಿ ರಾಜಕೀಯ ಮಾಡ್ತಿದೆ
ಇನ್ನೂ ಇದಕ್ಕೆ ಕೌಂಟರ್ ನೀಡಿರುವ ಟಿಎಂಸಿ, ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ. ಘಟನೆಉನ್ನು ಪೊಲೀಸರು ಘಟನೆಯನ್ನ ಸಂಪೂರ್ಣವಾಗಿ ವಿವರಿಸಿದ್ದಾರೆ. ಕಾಳಿಮಾತೆ ವಿರೂಪಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ರೆ ಬಿಜೆಪಿಯವರು ವಿಕೃತ ರಾಜಕೀಯ ಮಾಡ್ತಿರೋದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.