ಯಾದಗಿರಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ಭಯದಿಂದ ಹೃದಯಾಘಾತದಿಂದ ವ್ಯಕ್ತಿ ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೆ ಹೃದಯಾಘಾತ ಪ್ರಕರಣಗಳ ಸುದ್ದಿ ಹೆಚ್ಚಾಗುತ್ತಿದೆ. ಒಂದೆಲ್ಲಾ ಒಂದು ಹೃದಯಾಘಾತದಿಂದ ಸಾವು ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದೀಗ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು (Police) ದಾಳಿ ಮಾಡಿದ ಕಾರಣ ಭಯಗೊಂಡ ವ್ಯಕ್ತಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಾಲ ಗ್ರಾಮದಲ್ಲಿ ನಡೆದಿದೆ.

ಕುಳಿತಲ್ಲೇ ಹೃದಯಾಘಾತದಿಂದ ಸಾವು
ಹುಣಸಗಿ ತಾಲೂಕಿನ ವಜ್ಜಾಲ ಗ್ರಾಮದಲ್ಲಿ ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ಲಭಿಸಿದೆ. ಹಾಗಾಗಿ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ 35 ವರ್ಷದ ಮಂಜು ಎನ್ನುವವರು ಸಹ ಇಸ್ಪೀಟ್ ಆಡುತ್ತಿದ್ದರು. ಪೊಲೀಸರು ದಾಳಿ ಮಾಡಿದ ಕಾರಣದಿಂದ ಭಯಗೊಂಡು ಹೃದಯಾಘಾತವಾಗಿದ್ದು, ಕುಳಿತ ಜಾಗದಲ್ಲಿಯೇ ಉಸಿರು ಚೆಲ್ಲಿದ್ದಾರೆ.
ಪೊಲೀಸ್ ಠಾಣೆಯ ಮುಂದೆ ಕುಟುಂಬಸ್ಥರ ಪ್ರತಿಭಟನೆ
ಇನ್ನು ಮೃತ ಮಂಜು ಅವರ ಕುಟುಂಬಸ್ಥರಲ್ಲಿ ಈ ಘಟನೆಯಿಂದ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಮಂಜು ಅವರನ್ನ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಸರಿ ಸುಮಾರು 1 ಕೀಮೀರಷ್ಟು ಅಟ್ಟಾಡಿಸಿದ್ದು, ಇದರಿಂದಾಗಿ ಸುಸ್ತಾಗಿದೆ ಹಾಗೂ ಹೃದಯಾಘಾತವಾಗಿ ಮಂಜು ಸಾವಿಗೀಡಾಗಿದ್ದಾರೆ ಎಂದು ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.
ಗಣಪತಿ ವಿಸರ್ಜನೆಯಲ್ಲಿ ಹೃದಯಾಘಾತದಿಂದ ಸಾವು
ಗಣೇಶ ವಿಸರ್ಜನೆಯ ಮೆರವಣಿಗೆ ಸಮಯದಲ್ಲಿ ಹೃದಯಾಘಾತ ಉಂಟಾಗಿ ಕುಸಿದು ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕಳೆದ ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಡ್ಯಾನ್ಸ್ ಮಾಡುತ್ತಿದ್ದ 40 ವರ್ಷದ ಲಕ್ಷ್ಮೀಪತಿ ಎನ್ನುವವರಿಗೆ ಹೃದಯಾಘಾತವಾಗಿದೆ. ಹಾರ್ಟ್ ಅಟ್ಯಾಕ್ ಆದ ಕಾರಣ ವ್ಯಕ್ತಿ ಕುಸಿದು ಬಿದ್ದಿದ್ದು, ಸಾವನ್ನಪ್ಪಿದ್ದಾರೆ.
ಹಾಸನದಲ್ಲಿ ಸರಣಿ ಹೃದಯಾಘಾತ
ಹಾಸನದಲ್ಲಿ ಕೆಲ ತಿಂಗಳ ಹಿಂದೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದವು. ಅನೇಕ ಜನರು ಹೃದಯಾಘಾತಕೆ ಬಲಿ ಆಗಿದ್ದರು. ಈ ವಿಚಾರ ರಾಜ್ಯದಲ್ಲಿ ಸಹ ಆತಂಕವನ್ನ ಹೆಚ್ಚು ಮಾಡಿತ್ತು. ಈ ವಿಚಾರವನ್ನ ತನಿಖೆ ಮಾಡಲು ಸರ್ಕಾರ ಸಮಿತಿ ಸಹ ರಚನೆ ಮಾಡಿತ್ತು. ಅದರ ವರದಿಯಲ್ಲಿ ಹೃದಯಾಘಾತಕ್ಕೆ ಕಾರಣವನ್ನ ತಿಳಿಸಿತ್ತು. ಮಾಹಿತಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಒಟ್ಟು 24 ಜನರು ಹೃದಯಾಘಾತದಿಂದ ಸತ್ತಿದ್ದಾರೆ ಎನ್ನಲಾಗಿತ್ತು. ಇನ್ನು 24 ಜನರಲ್ಲಿ 20 ಜನರಿಗೆ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾರೆ ಎಂದು ಸಮಿತಿ ಹೇಳಿದ್ದು, ಉಳಿದ 4 ಜನರಲ್ಲಿ ಹೃದಯಾಘಾತವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು.