ಕುಟುಂಬ ಜಗಳ ಶಮನಕ್ಕೆ ಹೋದ ಪೊಲೀಸ್ ಅಧಿಕಾರಿ ಹ*ತ್ಯೆ

ತಿರುಪ್ಪುರ: ತಮಿಳುನಾಡಿನ ತಿರುಪ್ಪುರ ಜಿಲ್ಲೆಯ ಗುಡಿಮಂಗಲಂನಲ್ಲಿ ಅಪ್ಪ ಮತ್ತು ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪೊಲೀಸ್ ಇಲಾಖೆಯ ವಿಶೇಷ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆಗಸ್ಟ್ 5 ರಂದು ರಾತ್ರಿ 11 ಗಂಟೆ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ತಿರುಪ್ಪುರು ಜಿಲ್ಲೆಯ ಗುಡಿಮಂಗಲಂ ಪೊಲೀಸ್ ಠಾಣೆಯ ವಿಶೇಷ ಸಬ್ ಇನ್ಸ್‌ಪೆಕ್ಟರ್ ಎಂ. ಷಣ್ಮುಗವೇಲ್(57) ಮತ್ತು ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಅಳಗುರಾಜ, ಇಬ್ಬರು ವ್ಯಕ್ತಿಗಳು ಕುಡಿದು ಜಗಳವಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ತೆರಳಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಪೊಲೀಸ್ ಅಧಿಕಾರಿಯ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, ಕಾನ್‌ಸ್ಟೆಬಲ್ ನನ್ನು ಓಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಟಿ. ಸೆಂಥಿಲ್ ಕುಮಾರ್ ಅವರ ಪ್ರಕಾರ, ಕುಟುಂಬದೊಳಗೆ ಜಗಳವಿತ್ತು. ಗಸ್ತು ಕರ್ತವ್ಯದಲ್ಲಿದ್ದ ಎಸ್‌ಎಸ್‌ಐ ಷಣ್ಮುಗವೇಲ್ ಮತ್ತು ಕಾನ್‌ಸ್ಟೆಬಲ್ ಅಳಗುರಾಜ ಅವರು ಸಂಘರ್ಷವನ್ನು ಶಮನಗೊಳಿಸಲು ಉಡುಮಲ್‌ಪೇಟೆ ಬಳಿಯ ಜಮೀನಿಗೆ ತೆರಳಿದ್ದರು. ಈ ವೇಳೆ ಮಣಿಗಂದನ್ ಎಂಬ ವ್ಯಕ್ತಿ ಎಸ್‌ಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರ ಸಹೋದರ ತಂಗಪಾಂಡ್ಯನ್ ಮತ್ತು ಅವರ ತಂದೆ ಮೂರ್ತಿ ಕೂಡ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕಾನ್‌ಸ್ಟೆಬಲ್ ನನ್ನು ಓಡಿಸಿದ್ದಾರೆ ಅವರು ಹೇಳಿದ್ದಾರೆ.
ಎಸ್‌ಎಸ್‌ಐ ಷಣ್ಮುಗವೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾನ್‌ಸ್ಟೆಬಲ್ ಜೀವ ಬೆದರಿಕೆಯಿಂದ ಪಾರಾಗಿದ್ದಾರೆ.
ಮೂರ್ತಿ ಮತ್ತು ಅವರ ಇಬ್ಬರು ಪುತ್ರರಾದ ಮಣಿಗಂದನ್ ಮತ್ತು ತಂಗಪಾಂಡಿ ವಿರುದ್ಧ ತಲಾ ನಾಲ್ಕು ಪ್ರಕರಣಗಳಿದ್ದು, ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಐಜಿಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
