ಉಡುಪಿಯಲ್ಲಿ ಶಾಲಾ ವಾಹನಗಳ ವಿರುದ್ಧ ಪೊಲೀಸರ ಮಿಂಚಿನ ಕಾರ್ಯಾಚರಣೆ: 282 ವಾಹನಗಳಿಗೆ ದಂಡ, ₹1.58 ಲಕ್ಷ ವಸೂಲಿ!

ಉಡುಪಿ: ಜಿಲ್ಲೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನಗಳು, ಟ್ಯಾಕ್ಸಿ ಚಾಲಕರ ವಿರುದ್ಧ ಗುರುವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಧ್ಯಾಹ್ನದವರೆಗೆ 282 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, 1.58 ಲ.ರೂ. ದಂಡ ವಸೂಲಿ ಮಾಡಿದ್ದಾರೆ.

ಸುಮಾರು 930 ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ಮದ್ಯದ ನಶೆಯಲ್ಲಿ ಮಗುವನ್ನು ಶಾಲೆಗೆ ಕರೆದೊ ಯ್ಯುತ್ತಿದ್ದ ಓರ್ವ ಪೋಷಕರಿಗೂ ದಂಡ ವಿಧಿಸಲಾಗಿದೆ. ಸೂಕ್ತ ದಾಖಲೆಗಳನ್ನು ಹೊಂದಿರದ ಬಗ್ಗೆ 39, ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಬಗ್ಗೆ 48 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
5 ಮಂದಿ ಪೊಲೀಸ್ ನಿರೀಕ್ಷಕರು, 30 ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನಗಳನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ತಪಾಸಣೆ ಕೈಗೊಳ್ಳಲಾಗಿದೆ. ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ, ಶಾಲೆಯ ಎಲ್ಲ ವಾಹನಗಳ ದಾಖಲೆ, ನಿಗದಿತ ಮಿತಿಗನುಗುಣವಾಗಿ ಮಕ್ಕಳ ಸಂಖ್ಯೆ ಹಾಗೂ ಇತರ ಸುರಕ್ಷಾ ಕ್ರಮಗಳನ್ನು ವಾರದ ಒಳಗೆ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಶಾಲಾ ವಾಹನ ಹಾಗೂ ಆಟೋರಿಕ್ಷಾಗಳಲ್ಲಿ ಮಿತಿಮೀರಿ ಮಕ್ಕಳನ್ನು ತುಂಬುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಹಲವು ದೂರುಗಳು ಕೇಳಿಬಂದಿತ್ತು. ಕೆಲವು ವಾಹನಗಳು ಅತಿ ವೇಗದಲ್ಲಿ ಚಲಾಯಿಸಿಕೊಂಡು ಹೋಗುವ ಪರಿಣಾಮ ಅಪಘಾತಗಳಿಗೂ ಕಾರಣವಾಗುತ್ತಿವೆ. ಈ ಎಲ್ಲ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಇಂತಹ ಕಾರ್ಯಾಚರಣೆಗಳನ್ನು ಅನಿರೀಕ್ಷಿತವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
