“ಜೈಲಿನ ಹೊರಗೆ ರೌಡಿಯ ಬರ್ತ್‌ಡೇ ಸೆಲೆಬ್ರೇಷನ್: ಪಟಾಕಿ ಸಿಡಿಸಿ ಅಟ್ಟಹಾಸ ಮೆರೆದ ಮೂವರು ವಶಕ್ಕೆ”

ಕಲ್ಯಾಣ್: ಆಧಾರ್ ವಾಡಿ ಸೆರೆಮನೆಯಲ್ಲಿದ್ದ ಗೂಂಡಾನ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ನಾಲ್ಕು ಮಂದಿಯ ಪೈಕಿ ಮೂವರನ್ನು ಖದಕ್ ಪಾಡ ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದಾನೆ.
ಜೈಲಿನಲ್ಲಿದ್ದ ಉಲ್ಲಾಸನಗರದ ಗೂಂಡಾ ಸತೀಶ್ ಅಲಿಯಾಸ್ ಸತ್ಯಭಾಯಿ ಕಾಂಬ್ಳೆ ಎಂಬಾತನ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ರೋಹಿತ್ ಜಗದಾಳೆ, ಕ್ಷಿತಿಜ್ ಭಗತ್, ಆಕಾಶ್ ಖಾಡ್ಲಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ಜೈಲು ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿ ಭದ್ರತಾ ಆತಂಕಕ್ಕೆ ಕಾರಣರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

“ಜೈಲಿನ ಹೊರಗೆ ಪಟಾಕಿ ಸಿಡಿಸಿದ್ದು ತಿಳಿದುಬಂದ ಬೆನ್ನಲ್ಲೇ ಖದಕ್ ಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಕ್ಷಣ ಶೋಧ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿಗಾಗಿ ಶೋಧ ನಡೆದಿಯುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣ್ ಜೀ ಘಾಟೆ ವಿವರಿಸಿದ್ದಾರೆ.
ಇಂಥ ಕಾನೂನುಬಾಹಿರ ಕೃತ್ಯಗಳನ್ನು ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ರವಾನಿಸುವ ಸಲುವಾಗಿ ಪೊಲೀಸರು ನಗರದಲ್ಲಿ ಆರೋಪಿಗಳ ಪರೇಡ್ ನಡೆಸಿದರು.