ಆರೋಪಿ ಬೆನ್ನತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಪಘಾತಕ್ಕೆ ಬಲಿ

ಕಾಸರಗೋಡು: ಮಾದಕ ವಸ್ತು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಕಾರಿನಲ್ಲಿ ತೆರಳುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಪಘಾತಕ್ಕೆ ಬಲಿಯಾದ ಘಟನೆ ಶುಕ್ರವಾರ ಮುಂಜಾನೆ ನಗರ ಹೊರವಲಯದ ಚೆಂಗಳ ನಾಲ್ಕನೇ ಮೈಲ್ ನಲ್ಲಿ ನಡೆದಿದೆ.

ಬೇಕಲ ಡಿವೈಎಸ್‌ಪಿ ನೇತೃತ್ವದ ವಿಶೇಷ ತಂಡದ ಪೊಲೀಸ್ ಕಾನ್ಸ್ ಟೇಬಲ್ ಕೆ.ಕೆ ಸಜೀಶ್ (40) ಮೃತಪಟ್ಟವರು. ಮುಂಜಾನೆ 2.45 ರ ಸುಮಾರಿಗೆ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಇನ್ನೋರ್ವ ಪೊಲೀಸ್ ಗಾಯ ಹೊಂದಿದ್ದಾರೆ. ಕಾರು ಚಲಾಯಿಸುತ್ತಿದ್ದ ಸುಭಾಷ್ ಚಂದ್ರ ಗಾಯಗೊಂಡವರು.ಚೆಂಗಳ ನಾಲ್ಕನೇ ಮೈಲ್ ನಲ್ಲಿ ಅಂಡರ್ ಪಾಸೇಜ್ ಮೂಲಕ ಸರ್ವೀಸ್ ರಸ್ತೆಗೆ ಕಾರು ಬರುತ್ತಿದ್ದಂತೆ ಚೆರ್ಕಳದಿಂದ ಕಾಸರಗೋಡಿಗೆ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಇಬ್ಬರನ್ನು ಕೂಡಲೇ ಚೆಂಗಳದ ಆಸ್ಪತ್ರೆಗೆ ತಲುಪಿದರೂ, ಚಿಕಿತ್ಸೆಗೆ ಸ್ಪಂದಿಸದೆ ಸಜೀಸ್ ಮೃತಪಟ್ಟಿದ್ದಾರೆ. ಸುಭಾಷ್ ಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಹಾಗೂ ಗಾಂಜಾವನ್ನು ಮೇಲ್ಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 3.28 ಗ್ರಾಂ ಎಂಡಿಎಂಎ ಹಾಗೂ 10.65 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿತ್ತು.ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಟ್ಟಂಚಾಲ್ ನ ಅಹಮ್ಮದ್ ಕಬೀರ್ ಎಂಬಾತನನ್ನು ಬಂಧಿಸಲಾಗಿತ್ತು. ಎರಡನೇ ಆರೋಪಿಯಾಗಿರುವ ಕಣ್ಣೂರು ನಿವಾಸಿಯಾಗಿರುವ ದಂತ ವೈದ್ಯ ಡಾ. ಮುಹಮ್ಮದ್ ಸುನೀರ್ ಪರಾರಿಯಾಗಿದ್ದನು. ಈತ ಕಾಸರಗೋಡು ಪರಿಸರದಲ್ಲಿ ಇರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ಈತನ ಪತ್ತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಟಿಪ್ಪರ್ ಲಾರಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಸಂಜೆ ಹುಟ್ಟೂರಾದ ಚೆರ್ವತ್ತೂರು ಮಾಯಿಚ್ಚಿ ಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಗುವುದು.
