ಬೆಂಗಳೂರಿನ ಬಾರ್‌ಗಳ ಮೇಲೆ ಪೊಲೀಸರ ದಿಢೀರ್ ದಾಳಿ: 19 ಕಡೆ ನಿಯಮ ಉಲ್ಲಂಘನೆ ಪತ್ತೆ

ಬೆಂಗಳೂರು: ನಗರದಲ್ಲಿ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಮೆಜೆಸ್ಟಿಕ್ ಸುತ್ತಮುತ್ತಲ ಭಾಗಗಳಲ್ಲಿ ಬಾರ್ ಮತ್ತು ರೆಸ್ಟೊರೆಂಟ್‌ಗಳ ಮೇಲೆ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 11 ವಿಶೇಷ ಪೊಲೀಸ್ ತಂಡಗಳು ಭಾಗವಹಿಸಿದ್ದವು.

ಈ ವೇಳೆ 19 ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚಿದ್ದು, ದಾಳಿ ಸಮಯದಲ್ಲಿ, ಬಾರ್‌ಗಳಲ್ಲಿ ಯುವತಿಯರು ಅಶ್ಲೀಲ ಬಟ್ಟೆ ಹಾಕಿಕೊಂಡು ನೃತ್ಯ ಮಾಡುತ್ತಿದ್ದರೆ ಎಂದು ಹೇಳಲಾಗಿದೆ.
ಬಾರ್ ಮತ್ತು ರೆಸ್ಟೊರೆಂಟ್‌ಗಳ ಮೇಲೆ ದಾಳಿ:
ಇನ್ನು, ಬೆಂಗಳೂರಿನ 19 ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಯುವತಿಯರು ಅಶ್ಲೀಲ ನೃತ್ಯ, ಅನೈರ್ಮಲ್ಯ ಮತ್ತು ಸ್ಮೋಕ್ ಝೋನ್ ಸ್ಥಾಪನೆ ಮಾಡದಿರುವಂತಹ ನಿಯಮ ಉಲ್ಲಂಘನೆಗಳು ಕಂಡುಬಂದಿವೆ. ಈ ದಾಳಿಯ ನಂತರ, ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋಟ್ಪಾ ಕಾಯಿದೆಯ ಅಡಿ ದಂಡ:
ದಾಳಿ ಬಳಿಕ ಈ ಸ್ಥಳಗಳಲ್ಲಿ ಕೋಟ್ಪಾ ಕಾಯಿದೆಯ ಅಡಿಯಲ್ಲಿ ಬಾರ್ ಮತ್ತು ರೆಸ್ಟೊರೆಂಟ್‌ಗಳ ದಂಡ ವಿಧಿಸಲಾಗಿದೆ. ಮಾಲೀಕರಿಗೆ ಲೈಸೆನ್ಸ್ ರದ್ದು ಮಾಡುವುದರ ಕುರಿತು ಎಚ್ಚರಿಕೆ ನೀಡಲಾಗಿದೆ. ನೋ ಸ್ಮೋಕಿಂಗ್ ಝೋನ್ ಇಲ್ಲದಿರುವುದರಿಂದ ಸೂಕ್ತ ಕಾನೂನು ಕ್ರಮ ಜರುಗಿಸಲು ಆರೋಗ್ಯ ಮತ್ತು ಅಬಕಾರಿ ಇಲಾಖೆಗೆ ಮಾಹಿತಿ ನೀಡಲಾಗಿದೆ
ನಗರ ಪೊಲೀಸ್ ಆಯುಕ್ತರಿಂದ ಮಾಹಿತಿ:
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ʼಕೆಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆʼ ಎಂದು ಹೇಳಿದರು. ಈ ವೇಳೆ ಎಲ್ಲಾ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ. ಅಕ್ರಮ ಚಟುವಟಿಕೆಗಳು ಕಂಡುಬಂದರೆ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ದಾಳಿ ನಗರದಲ್ಲಿ ಕಾನೂನು ಉಲ್ಲಂಘನೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಕೈಗೊಳ್ಳಲಾಗಿರುವ ಕ್ರಮಗಳ ಭಾಗವಾಗಿದೆ ಎಂದು ವಿವರಿಸಿದರು.
